ಉದ್ಯೋಗ ಯಶಸ್ಸಿಗೆ ಪಠ್ಯಜ್ಞಾನ ಮಾತ್ರವಲ್ಲ, ಮೃದು ಕೌಶಲ್ಯವೂ ಅಗತ್ಯ: ಸಿಯುಕೆ ಕುಲಪತಿ
ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ಸಿಯುಕೆಯಲ್ಲಿ 'ಧ್ವನಿ, ಕ್ರಿಯಾಪದ ಮತ್ತು ದೃಶ್ಯಗಳು' ವಿಷಯದ ಕಾರ್ಯಾಗಾರ
ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ವಿಶ್ವ ಯುವ ಕೌಶಲ್ಯ ದಿನ ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಉದ್ಘಾಟಿಸಿ ಮಾತನಾಡಿದರು.
ಆಳಂದ: ಇಂದಿನ ಜಾಗತಿಕ ಸ್ಪರ್ಧಾತ್ಮಕ ಪರಿಸರದಲ್ಲಿ ಪದವಿ ಅಥವಾ ಅಂಕಗಳು ಮಾತ್ರ ಯಶಸ್ಸಿನ ಮಾನದಂಡವಾಗಿಲ್ಲ. ಪರಿಣಾಮಕಾರಿ ಸಂವಹನ, ನಾಯಕತ್ವ, ತಂಡದೊAದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹಾಗೂ ಸಮಸ್ಯೆ ಪರಿಹಾರ ಕೌಶಲ್ಯಗಳಂತಹ ಮೃದು ಕೌಶಲ್ಯಗಳನ್ನು ಅಳವಡಿಸಿಕೊಂಡಾಗಲೇ ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಭಿಪ್ರಾಯಪಟ್ಟರು.
ವಿಶ್ವ ಯುವ ಕೌಶಲ್ಯ ದಿನ–೨೦೨೬ರ ಅಂಗವಾಗಿ “ಭವಿಷ್ಯಕ್ಕಾಗಿ ಕೌಶಲ್ಯಗಳು” ಎಂಬ ಜಾಗತಿಕ ಧ್ಯೇಯವಾಕ್ಯದಡಿ, ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯ ಸಾಫ್ಟ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್, ಮಾನವಿಕ ಮತ್ತು ಭಾಷಾ ನಿಕಾಯ ಹಾಗೂ ಸಮಾಜ ಮತ್ತು ವರ್ತನಾ ವಿಜ್ಞಾನ ನಿಕಾಯಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ಧ್ವನಿ, ಕ್ರಿಯಾಪದ ಮತ್ತು ದೃಶ್ಯಗಳು: ಭಾಷೆ ಮತ್ತು ಮೃದು ಕೌಶಲ್ಯಗಳು” ವಿಷಯದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಜೊತೆಗೆ ಸಂವಹನ ಕೌಶಲ್ಯ, ಸಮಯ ನಿರ್ವಹಣೆ, ಸೃಜನಶೀಲತೆ, ಹೊಂದಾಣಿಕೆ, ಸಹಾನುಭೂತಿ ಮತ್ತು ನಾಯಕತ್ವದಂತಹ ಗುಣಗಳನ್ನು ಬೆಳೆಸಿಕೊಳ್ಳುವುದು ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನ ಯಶಸ್ಸಿಗೆ ಅತ್ಯಗತ್ಯ ಎಂದು ತಿಳಿಸಿದರು. ಇದೇ ಉದ್ದೇಶದಿಂದ ವಿಶ್ವವಿದ್ಯಾಲಯದಲ್ಲಿ ಸಾಫ್ಟ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಸ್ಥಾಪಿಸಲಾಗಿದ್ದು, ಅದರ ತರಬೇತಿ ಕಾರ್ಯಕ್ರಮಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಾಫ್ಟ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ನಿರ್ದೇಶಕಿ ಡಾ. ಸುಷ್ಮಾ ಎಚ್. ಸ್ವಾಗತ ಭಾಷಣದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಸಂವಹನ ಸಾಮರ್ಥ್ಯ ಹಾಗೂ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ತರಬೇತಿ ಹಾಗೂ ಕಾರ್ಯಾಗಾರಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕೆಂದು ತಿಳಿಸಿದರು.
ಮುಖ್ಯ ಭಾಷಣ ಮಾಡಿದ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ. ವಿಕ್ರಮ್ ವಿಸಾಜಿ, ನಿರಂತರ ಓದು, ಬರವಣಿಗೆ ಮತ್ತು ಅಭ್ಯಾಸದಿಂದ ಭಾಷಾ ಪ್ರಾವೀಣ್ಯತೆ ವೃದ್ಧಿಯಾಗುತ್ತದೆ. ಜಾಗತಿಕ ಅವಕಾಶಗಳನ್ನು ಬಳಸಿಕೊಳ್ಳಲು ಪರಿಣಾಮಕಾರಿ ಸಂವಹನ ಕೌಶಲ್ಯ ಅತ್ಯಗತ್ಯ ಎಂದು ಹೇಳಿದರು. ಸಮಾಜ ಮತ್ತು ವರ್ತನಾ ವಿಜ್ಞಾನ ನಿಕಾಯದ ಡೀನ್ ಪ್ರೊ. ಪವಿತ್ರಾ ಆಲೂರ್, ಕಲಿಕೆ ಜೀವನಪರ್ಯಂತ ಸಾಗುವ ನಿರಂತರ ಪ್ರಕ್ರಿಯೆ. ತಪ್ಪುಗಳನ್ನು ಅವಕಾಶಗಳಾಗಿ ಪರಿಗಣಿಸಿ ತಾರ್ಕಿಕ ಚಿಂತನೆ, ವಿಮರ್ಶಾತ್ಮಕ ವಿಶ್ಲೇಷಣೆ ಹಾಗೂ ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಭಾಷಾ ಪ್ರಾವೀಣ್ಯತೆ, ಸಾರ್ವಜನಿಕ ಭಾಷಣ, ವೃತ್ತಿಪರ ಸಂವಹನ, ತಂಡದೊAದಿಗೆ ಕಾರ್ಯನಿರ್ವಹಣೆ ಹಾಗೂ ಉದ್ಯೋಗ ಕೌಶಲ್ಯಗಳಿಗೆ ಸಂಬAಧಿಸಿದ ತಜ್ಞರ ಉಪನ್ಯಾಸಗಳು, ಸಂವಾದಾತ್ಮಕ ಚರ್ಚೆಗಳು, ಪ್ರಶ್ನೋತ್ತರ ಮತ್ತು ಪ್ರಾಯೋಗಿಕ ತರಬೇತಿ ಅವಧಿಗಳು ನಡೆದವು. ಈ ಸಂದರ್ಭದಲ್ಲಿ ಆಂಗ್ಲ ಮತ್ತು ವಿದೇಶಿ ಭಾಷಾ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಡೋಣೂರ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.