ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಕನ್ನಡ ವಚನಗಳ ಅನುವಾದ ಸಂಪುಟಗಳನ್ನು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಬಿಡುಗಡೆಗೊಳಿಸಿದರು. ಕುಲಪತಿ ಪ್ರೊ. ಬಿ. ರಮೇಶ್ ಡಾ. ಅರವಿಂದ ಜತ್ತಿ, ಕುಲಸಚಿವ ಪ್ರೊ.ಆರ್. ಬಿರಾದಾರ ಇತರರು ಇದ್ದರು.
ಆಳಂದ: “ಜಾತಿ, ಧರ್ಮ, ಭಾಷೆ ಹಾಗೂ ಪ್ರಾದೇಶಿಕ ಗಡಿಗಳನ್ನು ಮೀರಿ ಮಾನವೀಯತೆಯೇ ಬಸವಣ್ಣನವರ ಧರ್ಮದ ಮೂಲತತ್ವವಾಗಿದೆ” ಎಂದು ಬಸವ ಸಮಿತಿ ಅಧ್ಯಕ್ಷ ಡಾ. ಅರವಿಂದ ಜತ್ತಿ ಹೇಳಿದರು.
ತಾಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಸವ ಪೀಠ, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಬಸವ ಸಮಿತಿ ಸಹಯೋಗದಲ್ಲಿ ಜಪಾನೀಸ್, ಜರ್ಮನ್ ಮತ್ತು ಸ್ಪ್ಯಾನಿಷ್ ಭಾಷೆಗಳಿಗೆ ಅನುವಾದಗೊಂಡ ಕನ್ನಡ ವಚನ ಸಂಪುಟಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವಣ್ಣನವರ ವಚನಗಳು ಸಮಾನತೆ, ಕರುಣೆ ಮತ್ತು ಸಾಮಾಜಿಕ ಸಾಮರಸ್ಯದ ಸಾರ್ವತ್ರಿಕ ಮೌಲ್ಯಗಳನ್ನು ಸಾರುತ್ತವೆ. ೨೦೦೨ರಲ್ಲಿ ದಿವಂಗತ ಡಾ. ಎಂ.ಎA. ಕಲಬುರ್ಗಿ ಅವರ ಪ್ರೋತ್ಸಾಹದಿಂದ ಆರಂಭವಾದ ಅನುವಾದ ಯೋಜನೆಯಡಿ ಸುಮಾರು ೨,೫೦೦ ವಚನಗಳನ್ನು ಜಾಗತಿಕ ಭಾಷೆಗಳಿಗೆ ಅನುವಾದಿಸಲಾಗಿದೆ. ಈ ಕಾರ್ಯದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಪಾತ್ರ ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಬಸವಣ್ಣನವರ ತತ್ವಗಳು ಇಂದಿನ ಭ್ರಷ್ಟಾಚಾರ, ಅಸಮಾನತೆ ಹಾಗೂ ಪರಿಸರ ನಾಶದಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಸೂಚಿಸುತ್ತವೆ. ವಚನಗಳ ಅನುವಾದವು ಭಾರತೀಯ ಸಾಹಿತ್ಯ ಪರಂಪರೆಯನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಿದೆ ಎಂದರು.
ಬೆAಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ರಮೇಶ್ ಮಾತನಾಡಿ, ಬಸವಣ್ಣನವರ ವಚನಗಳು ಶಾಂತಿ, ಸಾಮಾಜಿಕ ನ್ಯಾಯ ಹಾಗೂ ಮಾನವ ಘನತೆಯ ಸಂದೇಶವನ್ನು ವಿಶ್ವದ ಜನತೆಗೆ ತಲುಪಿಸುವ ಸಾಂಸ್ಕೃತಿಕ ಸೇತುವೆಯಾಗಿವೆ ಎಂದು ಹೇಳಿದರು.
ಸಿಯುಕೆ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್, ಬಸವ ಪೀಠದ ಸಂಯೋಜಕ ಡಾ. ಗಣಪತಿ ಬಿ. ಸಿನ್ನೂರ್ ಸೇರಿದಂತೆ ಗಣ್ಯರು ಮಾತನಾಡಿದರು. ಇದೇ ಸಂದರ್ಭದಲ್ಲಿ ಜರ್ಮನ್, ಜಪಾನೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳಿಗೆ ವಚನಗಳನ್ನು ಅನುವಾದಿಸಿದ ವಿದ್ವಾಂಸರನ್ನು ಸನ್ಮಾನಿಸಲಾಯಿತು. ಬಳಿಕ “ವಚನಗಳ ಅನುವಾದದಲ್ಲಿನ ಸವಾಲುಗಳು” ಕುರಿತು ಚರ್ಚಾಗೋಷ್ಠಿ ನಡೆಯಿತು.