ಗಡಿ ಭಾಗದ ಕನ್ನಡಿಗರ ಹಕ್ಕು ರಕ್ಷಣೆಗೆ ಸಂಘಟಿತ ಹೋರಾಟ ಅಗತ್ಯ: ಆನಂದ ಎಸ್. ದೊಡ್ಡಮನಿ
ಕನ್ನಡ ಅನುಷ್ಠಾನ, ಮಹಿಷಿ ವರದಿ ಜಾರಿ, ನೀಟ್ ರದ್ದು ಸೇರಿ ರಾಜ್ಯ ಸರ್ಕಾರಕ್ಕೆ ಕರವೇ ಒತ್ತಾಯ
ಆಳಂದ: ಪಟ್ಟಣದಲ್ಲಿ ಕರವೇ ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಆನಂದ ಎಸ್. ದೊಡ್ಡಮನಿ ಮಾತನಾಡಿದರು. ಶಿವುಪುತ್ರ ನಡಗೇರಿ, ಪ್ರವೀಣ ಮೊದಲೆ ಇತರರು ಇದ್ದರು.
ಆಳಂದ: ಗಡಿ ಭಾಗದ ಕನ್ನಡಿಗರ ಭಾಷೆ, ನೆಲ, ಜಲ, ಉದ್ಯೋಗ ಹಾಗೂ ಶೈಕ್ಷಣಿಕ ಹಕ್ಕುಗಳ ರಕ್ಷಣೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರತಿಯೊಬ್ಬ ಕಾರ್ಯಕರ್ತರೂ ಸಂಘಟಿತವಾಗಿ ಹೋರಾಟ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾ ಅಧ್ಯಕ್ಷ ಆನಂದ ಎಸ್. ದೊಡ್ಡಮನಿ ಕರೆ ನೀಡಿದರು.
ಪಟ್ಟಣದಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಘಟಕ ಆಯೋಜಿಸಿದ್ದ ನೂತನ ಕಾರ್ಯಕರ್ತರ ಸೇರ್ಪಡೆ ಹಾಗೂ ವಿವಿಧ ಗ್ರಾಮ ಶಾಖೆಗಳ ಪದಾಧಿಕಾರಿಗಳ ಘೋಷಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ ಹಾಗೂ ಕನ್ನಡಿಗರ ಹಕ್ಕುಗಳ ರಕ್ಷಣೆಯೇ ಕರವೇಯ ಪ್ರಮುಖ ಧ್ಯೇಯವಾಗಿದ್ದು, ಪ್ರತಿಯೊಬ್ಬ ಪದಾಧಿಕಾರಿಯೂ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಹೇಳಿದರು.
ಗಡಿ ಭಾಗದಲ್ಲಿ ಕನ್ನಡ ಭಾಷೆ, ಕನ್ನಡ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕನ್ನಡದ ಅನುಷ್ಠಾನ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಹಾಗೂ ಖಾಸಗಿ ವಾಣಿಜ್ಯ ಸಂಸ್ಥೆಗಳಲ್ಲಿ ಕನ್ನಡವೇ ಆಡಳಿತ ಮತ್ತು ವ್ಯವಹಾರದ ಪ್ರಮುಖ ಭಾಷೆಯಾಗಬೇಕು. ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವ ನಿಯಮವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಯುವಕರ ಉದ್ಯೋಗ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಡಾ. ಸರೋಜಿನಿ ಮಹಿಷಿ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಸ್ಥಳೀಯರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಗಡಿ ಭಾಗದ ಶಾಸಕರು, ಸಚಿವರು ಹಾಗೂ ಜನಪ್ರತಿನಿಧಿಗಳು ಕನ್ನಡದ ಅಭಿವೃದ್ಧಿ, ಗಡಿ ಭಾಗದ ಮೂಲಸೌಕರ್ಯ, ಶಿಕ್ಷಣ, ಕುಡಿಯುವ ನೀರು, ರಸ್ತೆ ಹಾಗೂ ರೈತರ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಗಡಿ ಭಾಗದ ಜನರು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರ ವಿಶೇಷ ಯೋಜನೆ ರೂಪಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ನೀಟ್ ಪರೀಕ್ಷೆಯಿಂದ ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ವೈದ್ಯಕೀಯ ಹಾಗೂ ವೃತ್ತಿಪರ ಶಿಕ್ಷಣ ಪ್ರವೇಶಕ್ಕಾಗಿ ಇರುವ ಕೇಂದ್ರೀಕೃತ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ, ರಾಜ್ಯ ಮಟ್ಟದಲ್ಲಿಯೇ ಕನ್ನಡ ಭಾಷೆಯಲ್ಲಿ ಪರೀಕ್ಷೆ ನಡೆಸುವ ವ್ಯವಸ್ಥೆ ಜಾರಿಯಾಗಬೇಕು. ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ದೊರೆಯಲಿದ್ದು, ಹೊರ ರಾಜ್ಯದ ವಿದ್ಯಾರ್ಥಿಗಳ ಸ್ಪರ್ಧೆಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ತಪ್ಪಲಿದೆ ಎಂದು ಹೇಳಿದರು.
ಕೇವಲ ಭಾಷೆಯ ವಿಚಾರವಷ್ಟೇ ಅಲ್ಲದೆ ರೈತರ ಸಮಸ್ಯೆಗಳು, ನೀರಾವರಿ, ಬೆಳೆ ವಿಮೆ, ಬೆಂಬಲ ಬೆಲೆ, ಭೂ ಹಕ್ಕು, ಉದ್ಯೋಗ, ವಿದ್ಯಾರ್ಥಿವೇತನ ಸೇರಿದಂತೆ ಜನಸಾಮಾನ್ಯರ ಸಮಸ್ಯೆಗಳಿಗೂ ಕರವೇ ನಿರಂತರ ಧ್ವನಿಯಾಗಲಿದೆ. ರೈತರ ಬದುಕು ಮತ್ತು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗುವ ಯಾವುದೇ ನಿರ್ಧಾರವನ್ನು ಸಂಘಟನೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕರ್ತರು ಯಾವುದೇ ಪಕ್ಷ, ಜಾತಿ ಅಥವಾ ಧರ್ಮದ ಆಧಾರದ ಮೇಲೆ ಅಲ್ಲದೆ ಕನ್ನಡದ ಅಸ್ತಿತ್ವ ಮತ್ತು ರಾಜ್ಯದ ಹಿತಾಸಕ್ತಿಯನ್ನು ಮುಖ್ಯವಾಗಿಟ್ಟುಕೊಂಡು ಕೆಲಸ ಮಾಡಬೇಕು. ಸಮಾಜದಲ್ಲಿ ಸೌಹಾರ್ದತೆ ಕಾಪಾಡುತ್ತಾ ಸಂಘಟನೆಯ ಗೌರವ ಹೆಚ್ಚಿಸುವ ರೀತಿಯಲ್ಲಿ ನಡೆದುಕೊಳ್ಳಬೇಕು. ಪ್ರತಿಯೊಂದು ಗ್ರಾಮದಲ್ಲೂ ಸದಸ್ಯತ್ವ ಅಭಿಯಾನ ನಡೆಸಿ ಯುವಜನರನ್ನು ಸಂಘಟನೆಗೆ ಸೆಳೆಯಬೇಕು. ಕನ್ನಡದ ಇತಿಹಾಸ, ಸಂಸ್ಕೃತಿ ಹಾಗೂ ಸಾಹಿತ್ಯದ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ನೇತೃತ್ವದಲ್ಲಿ ಕನ್ನಡ, ನೆಲ, ಜಲ ಹಾಗೂ ಕನ್ನಡಿಗರ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟಗಳಿಗೆ ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತರೂ ಶಕ್ತಿ ತುಂಬಬೇಕು. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಕರವೇ ಸದಾ ಮುಂಚೂಣಿಯಲ್ಲಿ ನಿಂತು ಹೋರಾಡಲಿದೆ ಎಂದು ಹೇಳಿದರು.
ಕನ್ನಡ ಭಾಷೆ, ಕನ್ನಡಿಗರ ಹಕ್ಕುಗಳು ಹಾಗೂ ರಾಜ್ಯದ ಅಭಿವೃದ್ದಿಯ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದರೆ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದ ಅವರು, ಕರವೇ ಕಾರ್ಯಕರ್ತರು ಧೈರ್ಯ, ಶಿಸ್ತು ಹಾಗೂ ಸೇವಾ ಮನೋಭಾವದಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಂಘಟನೆಯನ್ನು ಕನ್ನಡಿಗರ ಭದ್ರಕೋಟೆಯನ್ನಾಗಿ ರೂಪಿಸಬೇಕು ಎಂದು ಕರೆ ನೀಡಿದರು
ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟೇಶ ರಾಠೋಡ, ಸಹ ಕಾರ್ಯದರ್ಶಿ ಅಶೋಕ ಚವ್ಹಾಣ, ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಪ್ರವೀಣ ಮೊದಲೆ, ಪುರಸಭೆ ಮಾಜಿ ಸದಸ್ಯ ಶಿವುಪುತ್ರ ನಡಗೇರಿ, ಸುನಿಲ ಹಿರೋಳಿಕರ, ಫಯಾಜ ಪಟೇಲ, ಅವರು ಮಾತನಾಡಿದರು.
ತಾಲೂಕು ಅಧ್ಯಕ್ಷ ಪ್ರವೀಣ ಮೊದಲೆ, ಕರವೇ ಕಮಲಾಪೂರ ಅಧ್ಯಕ್ಷ ಪ್ರಜ್ವಲ್ ಹುಂಪಳಿ, ಭೀಮಾ ಸೂರ್ಯವಂಶಿ, ರಾಹುಲ್, ಅಮಿತ್ ಪಾಟೀಲ, ಪ್ರಕಾಶ ತೋಳೆ, ಆಕಾಶ ಜಿಡಗಿ, ಬಸವರಾಜ ಶ್ರೇಂಗೇರಿ, ಪ್ರೇಮ ರಾಠೋಡ, ಮಹೇಶ ವಾರಿಕ, ಅಜಯ ಸಿಎಂ, ಪ್ರೀತಂ ಕೋರೆ, ಕರಣ ಡೊಲೆ, ನಾಗರಾಜ ಆರ್ಯ ಅನೇಕರು ಉಪಸ್ಥಿತರಿದ್ದರು.
ವಿವಿಧ ಗ್ರಾಮ ಶಾಖೆ, ಘಟಕದ ಪದಾಧಿಕಾರಿಗಳನ್ನು ಕನ್ನಡ ಶಲ್ಯಹೊದಿಸಿ ಸ್ವಾಗತಿಸಿ ಗೌರವಿಸಲಾಯಿತು. ಸಿದ್ಧಾರ್ಥ ಹರಸೂರೆ ಸ್ವಾಗತಿಸಿದರು. ಬಸವರಾಜ ಶ್ರೀಂಗೇರಿ ನಿರೂಪಿಸಿದರು. ತಾಲೂಕು ಅಧ್ಯಕ್ಷ ಪ್ರವೀಣ ಮೊದಲೆ ವಂದಿಸಿದರು.