ಆಳಂದ: ಹಳ್ಳಿಸಲಗರ ಗ್ರಾಮದಲ್ಲಿ ರೈತರು ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿ ಕತ್ತೆ ಹಾಗೂ ಮೇಕೆ ಮದುವೆ ನೆರವೇರಿಸಿ ಸಾಂಪ್ರದಾಯಿಕ ಮೆರೆದರು.
ಆಳಂದ: ಉತ್ತಮ ಮಳೆಯಾಗಲಿ, ರೈತರ ಬೆಳೆ ಸಮೃದ್ಧಿಯಾಗಲಿ ಎಂಬ ಆಶಯದೊಂದಿಗೆ ತಾಲೂಕಿನ ಹಳ್ಳಿಸಲಗರ ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ಕತ್ತೆಗಳ ಮದುವೆ ನೆರವೇರಿಸಿ ವರುಣದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗ್ರಾಮೀಣ ಭಾಗದಲ್ಲಿ ತಲೆಮಾರಿನಿಂದ ನಡೆದುಕೊಂಡು ಬಂದಿರುವ ಈ ವಿಶಿಷ್ಟ ಆಚರಣೆ ಭಕ್ತಿ, ಸಂಪ್ರದಾಯ ಹಾಗೂ ಜನಪದ ಸಂಸ್ಕೃತಿಯ ಪ್ರತೀಕವಾಗಿ ಗಮನ ಸೆಳೆಯಿತು.
ಮಳೆಯ ಕೊರತೆಯಿಂದ ರೈತರು ಆತಂಕಗೊAಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರಾಚೀನರ ಬಲವಾದ ನಂಬಿಕೆಯನ್ನು ಮುಂದುವರಿಸಿಕೊAಡು ಕತ್ತೆಗಳ ಜೋಡಿ ಕುರಿಗಳ ಮೂಲಕ ಸ್ವಾಗತಿಸಿ ಪ್ರಮುಖ ಸ್ಥಳದಲ್ಲಿ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಸಂಪ್ರದಾಯದAತೆ ಮೊದಲು ಎರಡೂ ಕಡೆಯ ಬೀಗರು ಭೇಟಿಯಾಗಿ ಪರಸ್ಪರ ಕುಂಕುಮ ಹಚ್ಚಿ, ಸಕ್ಕರೆ ಸವಿದು ಶುಭಾಶಯ ವಿನಿಮಯ ಮಾಡಿಕೊಂಡರು.
ನAತರ ಕಳಸಗಿತ್ತೆಯರು ಹೆಣ್ಣು ಹಾಗೂ ಗಂಡು ಕತ್ತೆಗಳಿಗೆ ಅರಿಶಿಣ–ಕುಂಕುಮ ಹಚ್ಚಿ, ಸುರಗಿ ಸುತ್ತಿ, ಸಂಪ್ರದಾಯಬದ್ಧವಾಗಿ “ಕಂಚೆಣ್ಣೆ–ಮಿAಚೆಣ್ಣೆ” ಹಾಡುಗಳನ್ನು ಹಾಡುತ್ತ ಎಣ್ಣೆ ಎರೆಯುವ ವಿಧಿ ನೆರವೇರಿಸಿದರು. ಹೊಸ ಬಟ್ಟೆಗಳನ್ನು ಹೊದಿಸಿ, ಬಾಸಿಂಗ ಕಟ್ಟಿ ಮದುಮಗ–ಮದುಮಗಳಂತೆ ಅಲಂಕರಿಸಲಾಯಿತು. ಕತ್ತೆಗಳ ಪರವಾಗಿ ಬಂಧುಗಳ ಪಾತ್ರವಹಿಸಿದ್ದ ಗ್ರಾಮಸ್ಥರು ವಿವಾಹ ವಿಧಿವಿಧಾನಗಳನ್ನು ನೆರವೇರಿಸಿದರೆ, ನೆರೆದಿದ್ದ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಅಕ್ಷತೆ ಹಾಕಿ ವರುಣದೇವರು ಕೃಪೆ ತೋರಿ ಉತ್ತಮ ಮಳೆ ಸುರಿಸಲಿ ಎಂದು ಪ್ರಾರ್ಥಿಸಿದರು.
ವಿವಾಹದ ಬಳಿಕ ಕತ್ತೆಗಳನ್ನು ಅಲಂಕರಿಸಿದ ರಥದಂತೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಾಜಾ–ಭಜಂತ್ರಿ, ಬ್ಯಾಂಜೋ ಹಾಗೂ ಸಾಂಪ್ರದಾಯಿಕ ವಾದ್ಯಗಳ ಸದ್ದಿಗೆ ಯುವಕರು ಮತ್ತು ರೈತರು ಉತ್ಸಾಹದಿಂದ ನೃತ್ಯ ಮಾಡಿದರು. ಗ್ರಾಮವೇ ಹಬ್ಬದ ವಾತಾವರಣದಲ್ಲಿ ಮಿಂದೇಳಿದ್ದು, ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಗ್ರಾಮದ ಭಜನಾ ಸಂಘದ ಸದಸ್ಯರು “ಓಂ ನಮಃ ಶಿವಾಯ” ನಾಮಸ್ಮರಣೆ ಹಾಗೂ ಭಜನೆಗಳನ್ನು ಹಾಡುತ್ತ ಭಕ್ತಿಭಾವದಿಂದ ಗ್ರಾಮದ ಸುತ್ತ ಪ್ರದಕ್ಷಿಣೆ ಹಾಕಿದರು. ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಈ ಕಾರ್ಯಕ್ರಮದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ವಿಶೇಷವಾಗಿದ್ದು, ರೈತ ಸಮುದಾಯ ಉತ್ತಮ ಮಳೆಯ ನಿರೀಕ್ಷೆಯಲ್ಲಿ ವರುಣದೇವರಲ್ಲಿ ಬೇಡಿಕೊಂಡರು.
ಗ್ರಾಮದ ಹಿರಿಯರು ಮಾತನಾಡಿ, “ಪ್ರಕೃತಿಯ ಮೇಲಿನ ಗೌರವ ಹಾಗೂ ಮಳೆಗಾಗಿ ಸಾಮೂಹಿಕ ಪ್ರಾರ್ಥನೆಯ ಸಂಕೇತವಾಗಿ ನಮ್ಮ ಪೂರ್ವಜರು ಈ ಸಂಪ್ರದಾಯವನ್ನು ಆರಂಭಿಸಿದ್ದು, ಇಂದಿಗೂ ಅದನ್ನು ಭಕ್ತಿಯಿಂದ ಮುಂದುವರಿಸಿಕೊAಡು ಬರುತ್ತಿದ್ದೇವೆ. ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂಬುದೇ ನಮ್ಮ ಆಶಯ” ಎಂದು ತಿಳಿಸಿದರು.
ಈ ವಿಶಿಷ್ಟ ಕತ್ತೆಗಳ ಮದುವೆ ಕಾರ್ಯಕ್ರಮವನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ಜನರು ಸಹ ಆಗಮಿಸಿದ್ದು, ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು.