ಆಳಂದ: ಪಟ್ಟಣದಲ್ಲಿ ವಿಶ್ವ ಬಾಲಕಾರ್ಮಿಕ ವಿರೋದಿ ದಿನಾಚರಣೆ ಅಂಗವಾಗಿ ನಡೆದ ಜಾಗೃತಿ ಜಾಥಾವನ್ನು ನ್ಯಾಯಾಧೀಶೆ ಕುಮಾರಿ ಸುಮನ್ ಚಿತರಗಿ ಚಾಲನೆ ನೀಡಿದರು.
ಆಳಂದ: ಬಾಲಕಾರ್ಮಿಕರ ರಕ್ಷಣೆಗೆ ಕಾನೂನು ನೆರವು ನೀಡಲಿದೆ. ಇದಕ್ಕಾಗಿ ನಾಗರಿಕ ಸಮಾಜ ಹಾಗೂ ಸಂಬAಧಿತ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯತ ಕಾರ್ಯ ನಿರ್ವಹಿಸುವ ಮೂಲಕ ಸಮಾಜದಲ್ಲಿ ಅನಿಷ್ಠತೆಯಿಂದ ಕೂಡಿದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶ್ರಮಿಸಬೇಕಾಗಿದೆ ಎಂದು ಸ್ಥಳೀಯ ಪ್ರಧಾನ ಸವಿಲ್ ನ್ಯಾಯಾಲಯ ನ್ಯಾಯಾಧೀಶೆ, ಕಾನೂನು ಅರಿವು ನೆರವು ಸದಸ್ಯ ಕಾರ್ಯದರ್ಶಿ ಕುಮಾರಿ ಸುಮನ ಚಿತ್ತರಗಿ ಅವರು ಕರೆ ನೀಡಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಸೋಮವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆ ಹಾಗೂ ಕಾರ್ಯನಿರತ ಪತ್ರಕರ್ತ ಸಂಘ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಹಸಿರು ಧ್ವಜ ತೋರಿ ಚಾಲನೆ ನೀಡಿ ಅವರು ಮಾತನಾಡಿದರು.
ಬಡತನ, ನಿರಕ್ಷರತೆ ಹಾಗೂ ಸಾಮಾಜಿಕ ಅಸಮಾನತೆಗಳು ಬಾಲಕಾರ್ಮಿಕ ಪದ್ಧತಿಗೆ ಪ್ರಮುಖ ಕಾರಣಗಳಾಗಿವೆ. ಮಕ್ಕಳನ್ನು ದುಡಿಮೆಗೆ ತಳ್ಳುವ ಬದಲು ಶಾಲೆಗೆ ಕಳುಹಿಸಿ ಉತ್ತಮ ಶಿಕ್ಷಣ ನೀಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ. ಮಕ್ಕಳನ್ನು ದುಡಿಮೆಗೆ ಬಳಸುವುದು ಕಾನೂನುಬಾಹಿರವಾಗಿದ್ದು, ಇಂತಹ ಪ್ರಕರಣಗಳು ಕಂಡುಬAದರೆ ಸಾರ್ವಜನಿಕರು ಕೂಡಲೇ ಸಂಬAಧಿತ ಇಲಾಖೆಗೆ ಮಾಹಿತಿ ನೀಡಬೇಕು. ಬಾಲಕಾರ್ಮಿಕರ ವಿರುದ್ಧದ ಹೋರಾಟವು ಕೇವಲ ಸರ್ಕಾರದ ಹೊಣೆಗಾರಿಕೆಯಾಗಿರದೆ, ಇಡೀ ಸಮಾಜದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರಕುಮಾರ ಬಲ್ಲೂರ ಮಾತನಾಡಿ, ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ೧೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವುದು ಕಾನೂನುಬಾಹಿರವಾಗಿದೆ. ಅಪಾಯಕಾರಿ ಕೆಲಸಗಳಲ್ಲಿ ಮಕ್ಕಳನ್ನು ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಬಾಲಕಾರ್ಮಿಕರನ್ನು ಕಂಡುಬAದಲ್ಲಿ ಕಾರ್ಮಿಕ ಇಲಾಖೆ ಅಥವಾ ಮಕ್ಕಳ ಸಹಾಯವಾಣಿ ೧೦೯೮ಕ್ಕೆ ಮಾಹಿತಿ ನೀಡಿ ಮಕ್ಕಳ ರಕ್ಷಣೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಾರ್ಮಿಕ ಯೋಜನಾ ಸೋಸೈಟಿ ನಿರ್ದೇಶಕ ಸಂತೋಷ ಕುಲಕರ್ಣಿ, ನ್ಯಾಯವಾದಿ ಸಂಘದ ಅಧ್ಯಕ್ಷ ಕಮಲ ರಾಠೋಡ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಗದೇವಿ, ಸಮನ್ವಯಾಧಿಕಾರಿ ಅಣ್ಣಪ್ಪ ಹಾದಿಮನಿ, ಸರ್ಕಾರಿ ವಕೀಲ ಇಸ್ಮಾಯಿಲ್ ಪಟೇಲ್, ಜ್ಯೋತಿ ವಿ. ಬಂದಿ, ನ್ಯಾಯವಾದಿ ಸಂಘದ ಕಾರ್ಯದರ್ಶಿ ಬಿ.ಟಿ.ಸಿಂಧೆ, ಮಾರ್ಗದರ್ಶಿ ಸಂಸ್ಥೆಯ ಆನಂದ, ಮಕ್ಕಳ ಸಹಾಯವಾಣಿ ಸಂತೋಷ ಮತ್ತು ಸಿಯುಕೆ ವಿದ್ಯಾರ್ಥಿ ವಿಷ್ಟು ಸೇರಿದಂತೆ ಸರ್ಕಾರಿ ಕನ್ಯಾ ಪ್ರೌಢಶಾಲೆ ವಿದ್ಯಾರ್ಥಿನಿಯರು ಹಾಗೂ ಸಹ ಶಿಕ್ಷಕ, ಶಿಕ್ಷಕಿಯರು ಸಿಬ್ಬಂದಿಗಳು ಜಾಥಾದಲ್ಲಿ ಭಾಗವಹಿಸಿದ್ದರು.