Shubhashaya News

ಅಂತರಶಿಸ್ತೀಯ ಸಂಶೋಧನೆಗೆ ಉತ್ತೇಜನ ಅಗತ್ಯ: ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ರಿಸರ್ಚ್ ಕನೆಕ್ಟ್ಸ್” ಕಾರ್ಯಕ್ರಮದಲ್ಲಿ ಯುನಿಸೆಫ್ ಶಿಕ್ಷಣ ತಜ್ಞ ಶ್ರೀ ಶೇಷಗಿರಿ ರಾವ್, ಪ್ರೊ. ಜಿ.ಆರ್. ಅಂಗಡಿ, ಪಿ.ಎಸ್. ಕಟ್ಟಿಮನಿ ಇತರರು ಇದ್ದರು.

ಆಳಂದ: ತಾಲೂಕಿನ ಕಡಗಂಚಿ ಬಳಿಯ ಕೇಂದ್ರ ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗ ಹಾಗೂ ಶಿಕ್ಷಣ ಮತ್ತು ತರಬೇತಿ ಶಾಲೆಯ ವತಿಯಿಂದ ಆಯೋಜಿಸಿದ್ದ “ರಿಸರ್ಚ್ ಕನೆಕ್ಟ್ಸ್” ಕಾರ್ಯಕ್ರಮವನ್ನು ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ಆಶಯದಂತೆ ವಿಶ್ವವಿದ್ಯಾಲಯಗಳಲ್ಲಿ ಅಂತರಶಿಸ್ತೀಯ ಮತ್ತು ಬಹುಶಿಸ್ತೀಯ ಸಂಶೋಧನಾ ಚಟುವಟಿಕೆಗಳನ್ನು ಸಕ್ರಿಯವಾಗಿ ರೂಪಿಸಬೇಕೆಂದು ಅವರು ತಿಳಿಸಿದರು.
ಸಂಶೋಧನೆಗಳು ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಸಮರ್ಪಕ ಪರಿಹಾರ ಕಂಡುಹಿಡಿದು, ಉತ್ತಮ ಜೀವನ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಂಗವಾಗಿ ಹೈದರಾಬಾದ್‌ನ ಯುನಿಸೆಫ್ ಶಿಕ್ಷಣ ತಜ್ಞ ಶ್ರೀ ಶೇಷಗಿರಿ ರಾವ್ ಅವರು ಉಪನ್ಯಾಸ ನೀಡಿದರು. “ಸಂಶೋಧನೆಯಲ್ಲಿ ಉದಯೋನ್ಮುಖ ಪ್ರವೃತ್ತಿಗಳು” ವಿಷಯದ ಕುರಿತು ಗುಂಪು ಚರ್ಚೆಯೂ ನಡೆಯಿತು.

ಶಿಕ್ಷಣ ಮತ್ತು ತರಬೇತಿ ಶಾಲೆಯ ಡೀನ್ ಹಾಗೂ ವಿಭಾಗ ಮುಖ್ಯಸ್ಥರಾದ ಪ್ರೊ. ಜಿ.ಆರ್. ಅಂಗಡಿ ಮಾತನಾಡಿ, ಶಿಕ್ಷಣವು ಅರ್ಥಪೂರ್ಣವಾಗಿದ್ದು ಸಂತೋಷಕರ ಹಾಗೂ ಸಮೃದ್ಧ ಜೀವನಕ್ಕೆ ದಾರಿ ತೋರಿಸಬೇಕೆಂದು ಹೇಳಿದರು. ಶ್ರೀ ಶೇಷಗಿರಿ ರಾವ್ ಅವರು ಶಾಲಾ ಶಿಕ್ಷಣದಲ್ಲಿ ಕಾಣಿಸಿಕೊಳ್ಳುತ್ತಿರುವ ಕಲಿಕೆಯ ದುರ್ಬಲ ಫಲಿತಾಂಶಗಳು, ಶಿಕ್ಷಕರ ದೃಷ್ಟಿಕೋನ ಮತ್ತು ತೆಲಂಗಾಣ ರಾಜ್ಯದಲ್ಲಿ ಎದುರಾಗುತ್ತಿರುವ ಸವಾಲುಗಳ ಬಗ್ಗೆ ಇತ್ತೀಚಿನ ಅಧ್ಯಯನಗಳ ಆಧಾರದ ಮೇಲೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡರು.
ಪ್ಯಾನಲ್ ಚರ್ಚೆಗೆ ಗ್ರಂಥಪಾಲಕರಾದ ಡಾ. ಪಿ.ಎಸ್. ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಚರ್ಚೆಯಲ್ಲಿ ಡಾ. ಸಂದೀಪ್ ಇನಾಂಪುಡಿ, ಡಾ. ಸ್ವಾಗತ್ ಘೋಷ್, ಡಾ. ನಟರಾಜ ಪಟ್ಟೇದ್, ಡಾ. ಸುರೇಶ್ ಅನುಗಂಟಿ ಹಾಗೂ ಡಾ. ಜೋಮಿಯರ್ ಬಾಗ್ರಾ ಭಾಗವಹಿಸಿ, ತಮ್ಮ ತಮ್ಮ ಕ್ಷೇತ್ರಗಳ ಇತ್ತೀಚಿನ ಸಂಶೋಧನಾ ಧೋರಣೆಗಳನ್ನು ವಿವರಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಡಾ. ಮಯೂರ್ ಪೂಜಾರಿ ವಂದನಾರ್ಪಣೆ ಸಲ್ಲಿಸಿ, ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಣೆ ಮತ್ತು ಉನ್ನತ ಶಿಕ್ಷಣದ ಗುಣಮಟ್ಟ ಪರಸ್ಪರ ಸಂಬAಧ ಹೊಂದಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಹಾಗೂ ವಿಜ್ಞಾನ ವಿಭಾಗಗಳ ಸುಮಾರು ೯೦ ಸಂಶೋಧನಾ ವಿದ್ಯಾರ್ಥಿಗಳು ಮತ್ತು ೧೫ ಅಧ್ಯಾಪಕರು ಭಾಗವಹಿಸಿದ್ದರು.
ಡಾ. ಕೆ. ತಿಯಾಗು, ಡಾ. ಆಶಾಲತಾ ಎಸ್., ಡಾ. ವಿ. ಸಾಯಿ ಅಭಿನವ್, ಡಾ. ಪಿ.ಬಿ. ಬಾಗೇವಾಡಿ, ಡಾ. ಎಂ. ಶ್ರೀದೇವಿ, ಡಾ. ಚಂದ್ರಶೇಖರ್ ಗೌಡ್, ಡಾ. ಬುಚ್ಚಿ ರೆಡ್ಡಿ ಪೋರೆಡ್ಡಿ, ಶ್ರೀ ಸಂತೋಷ್, ಸುಶ್ರೀ ಜ್ಯೋತ್ಸ್ನಾ ಹಾಗೂ ಡಾ. ಬಬ್ಲು ಕರಣ್ ಉಪಸ್ಥಿತರಿದ್ದರು. ತಾನ್ಯಾ ಮತ್ತು ಸೌಮ್ಯ ಸ್ವಾಗತಿಸಿದರು. ಪ್ಯಾನಲ್ ಚರ್ಚೆಯನ್ನು ಸುಶ್ರೀ ಸುಶ್ಮಿತಾ ನಾಥ್ ನಿರ್ವಹಿಸಿದರು. ಕಿರಣ್ ಘೋಷ್ ವಂದಿಸಿದರು.

Comments are closed.

Don`t copy text!