Shubhashaya News

ಗ್ರಾಮೀಣ ಪ್ರತಿಭೆಗಳ ಅಕ್ಷರ ಜಾತ್ರೆ: ‘ಅರಿವಿನ ಅಂಗಳ’ವೊಂದು ಬೆರಗು!

​ಇವತ್ತಿನ ಮೊಬೈಲ್, ಇಂಟರ್ನೆಟ್ ಯುಗದಲ್ಲಿ ಅಕ್ಷರಗಳಿಗಿಂತ ಎಮೋಜಿಗಳೇ (Emojis) ಹೆಚ್ಚು ಮಾತನಾಡುತ್ತಿರುವ ಕಾಲವಿದು. ಇಂಥ ಕಾಲಘಟ್ಟದಲ್ಲಿ ಹಳ್ಳಿಯ ಸರ್ಕಾರಿ ಶಾಲೆಯ ಮುಗ್ಧ ಕಂದಮ್ಮಗಳು ಪೆನ್ನು-ಪೇಪರ್ ಹಿಡಿದು ತಮ್ಮ ಮನದಾಳದ ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ ಎಂದರೆ ಅದೊಂದು ಅದ್ಭುತವೇ ಸರಿ. ನನ್ನ ಕೈಲೊಂದು ಪುಟ್ಟ, ಆದರೆ ಅತ್ಯಂತ ಮೌಲ್ಯಯುತವಾದ ಪುಸ್ತಕವಿದೆ. ಅದರ ಹೆಸರು- ‘ಅರಿವಿನ ಅಂಗಳ’.

​ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ತೋಟ್ನಳ್ಳಿ ಎಂಬ ಪುಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಬರಹ ಮತ್ತು ಸಂಗ್ರಹವಿದು. ಈ ಕೃತಿಯ ಪುಟಗಳನ್ನು ತಿರುವುತ್ತಿದ್ದರೆ ಅಪ್ಪಟ ಮಣ್ಣಿನ ವಾಸನೆ ಬಡಿಯುತ್ತದೆ. ಕೃಷಿ, ಜಾತ್ರೆ, ಶಾಲಾ ಜೀವನ, ಅಪ್ಪ-ಅಮ್ಮನ ಮೇಲಿನ ಪ್ರೀತಿ, ಶಿಕ್ಷಕರ ಮೇಲಿನ ಗೌರವ… ಹೀಗೆ ಹತ್ತು ಹಲವು ವಿಷಯಗಳು ಮಕ್ಕಳ ತಡವರಿಸುವ, ಆದರೆ ಅತ್ಯಂತ ಪ್ರಾಮಾಣಿಕ ನುಡಿಗಳಲ್ಲಿ ಮೈದಾಳಿವೆ.

​ನಾಲ್ಕನೇ ತರಗತಿಯ ಇಂಚರಾ ಬರೆದ “ನನ್ನ ಮೊದಲ ಕವಿತೆ”ಯ ಸಾಲುಗಳು, ೭ನೇ ತರಗತಿಯ ದಿವ್ಯಾಳ “ಆಟ ಏಕೆ ಆಡಬೇಕು?” ಎಂಬ ಮುಗ್ಧ ವಿವರಣೆ, ೩ನೇ ತರಗತಿಯ ಮಕಬೂಲಸಾಬ ಬರೆದ “ಜಾಣ ಗುಬ್ಬಿ” ಕಥೆ, ಸೀಮಾ ಬರೆದ “ಚತುರ ಭರತ” ಅಥವಾ ಆ ಪುಟ್ಟ ಪೋರಿ ೨ನೇ ತರಗತಿಯ ಸೋನಿಕಾ ಬಿಡಿಸಿದ ಕಾಮನಬಿಲ್ಲಿನ ಚಿತ್ರ… ಇವೆಲ್ಲವೂ ಕೇವಲ ಬರಹ-ಚಿತ್ರಗಳಲ್ಲ; ಗ್ರಾಮೀಣ ಮಕ್ಕಳ ಅಂತರಂಗದ ಕನ್ನಡಿಗಳು. ಕಾಗುಣಿತದ ಸಣ್ಣಪುಟ್ಟ ತಪ್ಪುಗಳಿರಬಹುದು, ಪ್ರಾಸಕ್ಕಾಗಿ ಹೆಣೆದ ಸಾಲುಗಳಿರಬಹುದು, ಆದರೆ ಅದರಲ್ಲಿರುವ ನೈಜತೆ, ಪಾರದರ್ಶಕತೆ ಮತ್ತು ನಿಷ್ಕಲ್ಮಶ ಮನೋಭಾವಕ್ಕೆ ಯಾವ ಖ್ಯಾತ ಸಾಹಿತಿಯ ಕೃತಿಯೂ ಸಾಟಿಯಾಗಲಾರದು. ಏಳೂರ ಒಡತಿ ದುರ್ಗಮ್ಮನ ಜಾತ್ರೆಯ ವರ್ಣನೆ ಹಾಗೂ ಕಾಗಿಣಾ ನದಿಯ ಬಗೆಗಿನ ಪ್ರಬಂಧಗಳು ಆ ಮಣ್ಣಿನ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತಿವೆ.

​ಈ ಸಾಹಸದ ಹಿಂದಿರುವ ನಿಜವಾದ ರೂವಾರಿಗಳು ಆ ಶಾಲೆಯ ಶಿಕ್ಷಕರು ಹಾಗೂ ಇದನ್ನು ಅಚ್ಚುಕಟ್ಟಾಗಿ ಸಂಪಾದಿಸಿದ ಅಜೀಮ್ ಪ್ರೇಮ್‌ಜಿ ಸಂಸ್ಥೆಯ ಎ.ಆರ್.ಪಿ ಗುರುಪಾದ ಡಬರಿ ಅವರು. ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಒಂದು ಶಾಲೆಯ ವಾತಾವರಣವನ್ನು ಹೇಗೆ ಬದಲಾಯಿಸಬಹುದು, ಮಕ್ಕಳನ್ನು ಹೇಗೆ ಜಾಗೃತಗೊಳಿಸಬಹುದು ಎಂಬುದಕ್ಕೆ ಈ ಕೃತಿ ಜೀವಂತ ಸಾಕ್ಷಿ. ತರಗತಿಯ ನಾಲ್ಕು ಗೋಡೆಗಳ ಮಧ್ಯೆ ಕೇವಲ ಪಠ್ಯಪುಸ್ತಕದ ಪಾಠ ಮಾಡುವುದಷ್ಟೇ ಶಿಕ್ಷಣವಲ್ಲ; ಮಕ್ಕಳೊಳಗಿನ ಸುಪ್ತ ಚೇತನವನ್ನು ಹೊರತಂದು, ಅವರ ಪ್ರತಿಭೆಗೆ ವೇದಿಕೆ ಕಲ್ಪಿಸುವುದರಲ್ಲೂ ಗುರುವಿನ ಜವಾಬ್ದಾರಿ ಅಡಗಿದೆ ಎಂಬುದನ್ನು ಈ ಅಕ್ಷರ ಯಜ್ಞ ಸಾಬೀತುಪಡಿಸಿದೆ. ಈ ಸುಂದರ ಕೃತಿಯನ್ನು ಪ್ರಕಟಿಸಿದ ಸೇಡಂನ ‘ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನ’ದ ಕಾರ್ಯವೂ ಬೆನ್ನು ತಟ್ಟುವಂಥದ್ದು.

​ಭವಿಷ್ಯದಲ್ಲಿ ಈ ‘ಅರಿವಿನ ಅಂಗಳ’ದಲ್ಲಿ ಅಕ್ಷರ ಬಿತ್ತಿದ ಮಕ್ಕಳೇ ನಾಡಿನ ದೊಡ್ಡ ಕವಿಗಳಾಗಬಹುದು, ಐಎಎಸ್ ಅಧಿಕಾರಿಗಳಾಗಬಹುದು. ಆದರೆ, ಅವರ ಬದುಕಿನ ಮೊದಲ ಹೆಜ್ಜೆಯಾಗಿ ಈ ಪುಸ್ತಕ ಎಂದೆಂದಿಗೂ ಅವರ ನೆನಪಿನ ಬುತ್ತಿಯಾಗಿರುತ್ತದೆ. ಬದುಕಿನ ನೈಜ ಶಿಕ್ಷಣವೆಂದರೆ ಇದೇ ಅಲ್ಲವೇ? ಕಮಲ ಕೆಸರಿನಲ್ಲಿ ಅರಳುವಂತೆ, ತೋಟ್ನಳ್ಳಿಯ ಈ ಸರ್ಕಾರಿ ಶಾಲೆಯ ಪ್ರತಿಭೆಗಳು ಈ ಕೃತಿಯ ಮೂಲಕ ಇಡೀ ನಾಡಿನ ಗಮನ ಸೆಳೆಯುವಂತಿವೆ. ಇಂಥ ನೂರಾರು ‘ಅರಿವಿನ ಅಂಗಳ’ಗಳು ನಮ್ಮ ನಾಡಿನ ಉದ್ದಗಲಕ್ಕೂ, ಮೂಲೆ-ಮೂಲೆಯ ಸರ್ಕಾರಿ ಶಾಲೆಗಳಲ್ಲಿ ನಿರ್ಮಾಣವಾಗಲಿ.

​ಈ ಮುದ್ದಾದ ಅಕ್ಷರ ಹಬ್ಬಕ್ಕೆ ಹಾಗೂ ಇದಕ್ಕೆ ನೀರೆರೆದು ಪೋಷಿಸಿದ ಶಿಕ್ಷಕ ವೃಂದಕ್ಕೆ ನನ್ನ ಕೋಟಿ ನಮನ!

 

ಶಿವರಾಜ ಸೂ. ಸಣಮನಿ, ಮದಗುಣಕಿ

ಸಹ ಶಿಕ್ಷಕರು, ಪಿಎಮ್‌‌ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ನೀಲಹಳ್ಳಿ, ತಾ. ಸೇಡಂ, ಜಿ. ಕಲಬುರಗಿ

Comments are closed.

Don`t copy text!