ಆಳಂದ: ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆ ನಸಿರವಾಡಿ ಹಾಳ ತಡಕಲ್ ಯಲ್ಲಾಲಿಂಗ ದೇವಸ್ಥಾನದಲ್ಲಿ ಹಮ್ಮಿಕೊಂಡ ವಚನ ಗಾಯನ ಕಾರ್ಯಕ್ರಮ ಪ್ರಕಾಶ ಗುಂಡಪ್ಪ ಪೂಜಾರಿ ಉದ್ಘಾಟಿಸಿದರು. ರೇವಣಸಿದ್ಧ, ತಾತೇರಾವ್ ಪಾಟೀಲ ಇತರರು ಇದ್ದರು.
ಆಳಂದ: ತಾಲೂಕಿನ ಹಾಳ ತಡಕಲ್ ಗ್ರಾಮದ ಯಲ್ಲಾಲಿಂಗ ದೇವಸ್ಥಾನದಲ್ಲಿ ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆ, ನಸಿರವಾಡಿ ವತಿಯಿಂದ ಆಯೋಜಿಸಲಾದ ವಚನ ಗಾಯನ ಕಾರ್ಯಕ್ರಮ ಭಕ್ತಿಭಾವ ಹಾಗೂ ಸಾಂಸ್ಕøತಿಕ ಸೊಗಡಿನಿಂದ ನೆರವೇರಿತು.
ಕಾರ್ಯಕ್ರಮವನ್ನು ಪ್ರಕಾಶ ಗುಂಡಪ್ಪ ಪೂಜಾರಿ ಉದ್ಘಾಟಿಸಿ ಮಾತನಾಡಿ, ವಚನ ಸಾಹಿತ್ಯವು ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಮಹತ್ವದ ಸಾಧನವಾಗಿದ್ದು, ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಗೆ ಸನ್ಮಾರ್ಗದ ಅರಿವು ಮೂಡಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೈತ ರೇವಣಸಿದ್ಧ ಮಾಸ್ಟರ್ ಚಿಟಕೋಟಿ ಮಾತನಾಡಿ, ಜಾನಪದ ಮತ್ತು ವಚನ ಪರಂಪರೆ ನಮ್ಮ ಸಂಸ್ಕೃತಿಯ ಬೆನ್ನೆಲುಬಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಇವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಅತಿಥಿಗಳಾಗಿ ಸಿದ್ರಾಮ ಕಲಶೆಟ್ಟಿ, ಈರಣ್ಣಾ ಕಲಶೆಟ್ಟಿ ಹಾಗೂ ಕಲಾ ಸಂಸ್ಥೆಯ ಅಧ್ಯಕ್ಷ ತಾತೇರಾವ್ ಪಾಟೀಲ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಲಾ ಬಳಗದ ಸುಲೋಚನಾ ತೀರ್ಥ, ಮಹಾಂತಗೌಡ ಪಾಟೀಲ (ಶುಕ್ರವಾಡಿ), ರಾಜೇಶ್ವರಿ ಪಾಟೀಲ ತಮ್ಮ ಮನಮೋಹಕ ವಚನ ಗಾಯನದ ಮೂಲಕ ಶ್ರೋತೃಗಳನ್ನು ಆಕರ್ಷಿಸಿದರು. ಗಾಯನಕ್ಕೆ ಲಕ್ಷ್ಮೀಬಾಯಿ ಸಿರಗಾಪೂರ ಹಾರ್ಮೋನಿಯಂ ಸಾಥ ನೀಡಿದರೆ, ಆನಂದರಾಯ ಗಿಲಕಿ ತಬಲಾದಲ್ಲಿ ಲಯಬದ್ಧವಾಗಿ ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾ ಆಸಕ್ತರು ಗಾಯನವನ್ನು ಮನಸಾರೆ ಆಸ್ವಾದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಕ ಯಲ್ಲಾಲಿಂಗ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
Comments are closed.