Shubhashaya News

ಆಳಂದನಲ್ಲಿ ಭಕ್ತಿ, ಸಂಭ್ರಮ, ಸಂಸ್ಕøತಿಯ ಭವ್ಯ ಮೆರವಣಿಗೆ ಸಂಗಮ 

ಶ್ರೀ ಸೇವಾಲಾಲ ಮಹಾರಾಜರ್ ಜಯಂತಿ ಮೊದಲು ಅದ್ಧೂರಿ ಸಮಾರಂಭ

ಆಳಂದ: ಪಟ್ಟಣದಲ್ಲಿ ನಡೆದ ಸಂತ ಸೇವಾಲಾಲ ಮಹಾರಾಜರ್ ಜಯಂತಿ ಸಮಾರಂಭವನ್ನು ಸಂಸದ ಸಾಗರ ಖಂಡ್ರೆ ಉದ್ಘಾಟಿಸಿದರು. ಮಾಜಿ ಸಚಿವ ರೇವುನಾಯಕ ಬೆಳಮಗಿ ಧಾರ್ಮಿಕ ಗುರುಗಳು ಸೇರಿ ಇತರರು ಇದ್ದರು.

ಆಳಂದ: ಪಟ್ಟಣದ ತಾಲೂಕು ಬಂಜಾರಾ ಸಮಾಜ ಆಶ್ರಯದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ ಮಹಾರಾಜರ 287ನೇ ಜಯಂತಿ ಕಾರ್ಯಕ್ರಮ ಭಕ್ತಿ ಭಾವ, ಸಡಗರ ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಅತ್ಯಂತ ಅದ್ಧೂರಿಯಾಗಿ ಇದೇ ಮೊದಲು ಬಾರಿಗೆ ಬೃಹತ್ ಸಮಾರಂಭ ನಡೆಯಿತು.

ರಾಜಕೀಯ ಗಣ್ಯರು, ಧಾರ್ಮಿಕ ಗುರುಗಳು ಹಾಗೂ ಬಂಜಾರ ಸಮಾಜದ ಪ್ರಮುಖರು ಭಾಗವಹಿಸಿ ಸಮಾರಂಭಕ್ಕೆ ಕಳೆ ತಂದರು.

ಬೆಳಗಿನ ಜಾವ ನಾಯಕ ನಗರದಲ್ಲಿ ಸಂತ ಸೇವಾಲಾಲ ಮಹಾರಾಜರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭವಾಯಿತು. ನಂತರ ಪ್ರಮುಖ ರಸ್ತೆಗಳ ಮೂಲಕ ಭವ್ಯ ಶೋಭಾಯಾತ್ರೆ ನಡೆಸಲಾಯಿತು. ವಾದ್ಯಮೇಳಗಳ ನಾದ, ಲಂಬಾಣಿ ಮಹಿಳೆಯರು ಹಾಗೂ ಯುವಕರ ಸಾಂಪ್ರದಾಯಿಕ ನೃತ್ಯ–ಗಾಯನ, ಧಾರ್ಮಿಕ ಘೋಷಣೆಗಳು, ಬಣ್ಣಬಣ್ಣದ ಅಲಂಕಾರಗಳೊಂದಿಗೆ ಸಾಗಿದ ಮೆರವಣಿಗೆ ಪಟ್ಟಣದಾದ್ಯಂತ ಭಕ್ತಿ–ಉತ್ಸಾಹದ ವಾತಾವರಣವನ್ನು ನಿರ್ಮಿಸಿತು.

ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ, ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷ ಸುಭಾಷ ಫೌಜಿ ಸೇರಿದಂತೆ ಸಮಾಜದ ಪ್ರಮುಖರ ನೇತೃತ್ವದಲ್ಲಿ ನಡೆದ ಈ ಶೋಭಾಯಾತ್ರೆ ಜನಮನ ಸೆಳೆಯುವ ಭವ್ಯತೆಗೆ ಸಾಕ್ಷಿಯಾಯಿತು. ಸಂತ ಸೇವಾಲಾಲ ಮಹಾರಾಜರ ಪ್ರತಿಮೆ–ಭಾವಚಿತ್ರದೊಂದಿಗೆ ಆಗಮಿಸಿದ ಧಾರ್ಮಿಕ ಗುರುಗಳ ಮೆರವಣಿಗೆಗೆ ಸಾರ್ವಜನಿಕರಿಂದ ಅಪಾರ ಭಕ್ತಿ–ಸನ್ಮಾನ ವ್ಯಕ್ತವಾಯಿತು.

ಮಧ್ಯಾಹ್ನ ಶ್ರೀರಾಮ ಮಾರುಕಟ್ಟೆಯಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ನಡೆದ ಸಮಾರಂಭವನ್ನು ಬೀದರ್ ಸಂಸದ ಸಾಗರ ಈಶ್ವರ ಖಂಡ್ರೆ ಉದ್ಘಾಟಿಸಿ ಮಾತನಾಡಿ, “ಸಂತ ಸೇವಾಲಾಲರ ಜೀವನ ಸಂದೇಶಗಳು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸಾಮಾಜಿಕ ಏಕತೆಯನ್ನು ಬಲಪಡಿಸುವ ಶಾಶ್ವತ ಮೌಲ್ಯಗಳಾಗಿವೆ. ಅವರ ಬೋಧನೆಗಳು ಇಂದಿನ ಯುವ ಪೀಳಿಗೆಗೆ ದಾರಿ ದೀಪವಾಗಬೇಕು” ಎಂದು ಹೇಳಿದ ಅವರು ಸಮುದಾಯ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಸಚಿವ ರೇವುನಾಯಕ ಬೆಳಮಗಿ ನಗಾರಿ ಭಾರಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಸ್ಕøತಿಕ ಕಳೆ ತುಂಬಿ ಮಾತನಾಡಿ, “ಸಂತ ಸೇವಾಲಾಲರ ಬೋಧನೆಗಳು ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಪ್ರೇರಣೆಯಾಗಿವೆ. ಸರ್ವಜನ ಹಿತ, ಸರ್ವಜನ ಸುಖ ಎಂಬ ಸಂದೇಶವನ್ನು ಅವರು ಜೀವನಪೂರ್ತಿ ಸಾರಿದ್ದಾರೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸುಭಾಷ ವಿ. ರಾಠೋಡ, ಜಿಪಂ ಮಾಜಿ ಸದಸ್ಯ ಹರ್ಸಾನಂದ ಎಸ್. ಗುತ್ತೇದಾರ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಂತ ಸೇವಾಲಾಲ ಮಹಾರಾಜರ ತ್ಯಾಗ, ಸೇವಾ ಮನೋಭಾವ ಮತ್ತು ಸಾಮಾಜಿಕ ಪರಿವರ್ತನೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ನಮನ ಸಲ್ಲಿಸಿದರು.

ದಿವ್ಯ ಸಾನ್ನಿಧ್ಯ ಶ್ರೀ ಬಳಿರಾಮ ಮಹಾರಾಜ, ಕೆಸರಟಗಿಯ ಮಾತಾ ಲತಾದೇವಿ, ಚೌಡಾಪೂರ ಶ್ರೀ ಮುರಹರಿ ಮಹಾರಾಜ್, ಲಾಡಚಿಂಚೋಳಿ ತಾಂಡಾದ ಶ್ರೀ ಸುನಿಲ ಮಹಾರಾಜ, ಅಚಲೇರಾ, ಶ್ರೀ ಸೋಮಲಿಂಗ ಮಹಾರಾಜ ಅವರು ವಹಿಸಿದ್ದರು.

ನ್ಯಾಯವಾದಿ ಬಾಬಾಸಾಹೇಬ ವಿ. ಪಾಟೀಲ, ಉದ್ಯಮಿ ಚನ್ನು ಪಾಟೀಲ, ಗುಂಡಪ್ಪ ಗೌಳಿ, ಗಂಗಾರಾಮ ಪವಾರ, ನ್ಯಾಯವಾದಿ ಸಂಜಯ ನಾಯಕ, ಸಂತೋಷ ಪವಾರ, ಕೋಟೇಶ ರಾಠೋಡ, ಅನೀಲ ಎಂ. ರಾಠೋಡ ಹಾಗೂ ಠಾಕೂರಸಿಂಗ್ ಎಂ. ರಾಠೋಡ ಸೇರಿ ಬಂಜಾರ ಸಮಾಜದ ಮುಖಂಡರು ಭಾಗವಹಿಸಿ ಮಾತನಾಡಿದರು.   .

ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ ನಿರೂಪಿಸಿದರು. ಸುಭಾಷ ಪೌಜಿ ಪ್ರಾಸ್ತಾವಿಕ ಮಾತನಾಡಿದರು. ಶಿವಾಜಿ ರಾಠೋಡ ಸ್ವಾಗತಿಸಿದರು.

Comments are closed.

Don`t copy text!