Shubhashaya News

ಹಸಿರು ಬರ ಘೋಷಿಸಿ; ತಕ್ಷಣ ಪರಿಹಾರ ವಿಮೆ ಬಿಡುಗಡೆಗೆ ಜೆಡಿಎಸ್ ವಾಲಿ ಒತ್ತಾಯ

ಆಳಂದ: ತಾಲೂಕಿನ ಹಳ್ಳಿಸಲಗರ ಹೊಲಗಳಲ್ಲಿ ಬೆಳೆಹಾನಿಯ ಕುರಿತಾಗಿ   ಜೆಡಿಎಸ್ ನಾಯಕಿ ಮಹೇಶ್ವರಿ ಎಸ್. ವಾಲಿ ಅವರು ರೈತ ಮಹಿಳೆಯರೊಂದಿಗೆ ಪರಿಶೀಲಿಸಿ ಸಮಸ್ಯೆ ಆಲಿಸಿದರು.

ಆಳಂದ: ಸತತ ಮಳೆಯಿಂದಾಗಿ ಆಳಂದ ತಾಲೂಕಿನಲ್ಲಿ ಹಸಿರು ಬರ ಆವರಿಸಿಕೊಂಡಿದ್ದು, ರೈತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ, ತಕ್ಷಣ ಹಸಿರು ಬರ ಘೋಷಿಸಿ, ಎಕರೆಗೆ 20,000 ರೂಪಾಯಿ ಪರಿಹಾರ ಹಾಗೂ ಬೆಳೆ ವಿಮೆ ಪಾವತಿಸಿದ ರೈತರಿಗೆ ಇನ್ಷುರೆನ್ಸ್ ಮೊತ್ತ ಬಿಡುಗಡೆ ಮಾಡುವಂತೆ ಜೆಡಿಎಸ್ ನಾಯಕಿ ಮಹೇಶ್ವರಿ ಎಸ್. ವಾಲಿ ಆಗ್ರಹಿಸಿದರು.

ಸೋಮವಾರ ಅವರು ಸಲಗರ ಹಾಗೂ ಮುನ್ನಹಳ್ಳಿ ಸೀಮಾಂತರದ ಹೊಲಗಳಿಗೆ ಭೇಟಿ ನೀಡಿ, ನೀರು ನಿಂತು ಹಾಳಾದ ಬೆಳೆಗಳ ಸ್ಥಿತಿಗತಿ ವೀಕ್ಷಿಸಿದರು. ಅಲ್ಲಿನ ರೈತ ಮಹಿಳೆಯರೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸಿದ ಅವರು, “ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ತೊಗರಿ, ಉದ್ದು, ಹೆಸರು, ಜೋಳ, ತೋಟಗಾರಿಕೆ ಹಾಗೂ ಹಣ್ಣಿನ ಬೆಳೆಗಳು ಹಾನಿಗೊಳಗಾಗಿವೆ. ರೈತರು ಆದಾಯದ ಮೂಲವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು” ಎಂದು ಒತ್ತಾಯಿಸಿದರು.

ಅವರು “ಹಾನಿ ಅಂದಾಜು ಮಾಡಲು ಅಧಿಕಾರಿಗಳು ರೈತರ ಅರ್ಜಿಯೇ ಆಧಾರ ಮಾಡಿಕೊಂಡಿದ್ದಾರೆ. ಅನೇಕ ರೈತರು ಅರ್ಜಿ ಸಲ್ಲಿಸಿಲ್ಲ. ಆದ್ದರಿಂದ, ಸಂಪೂರ್ಣ ಸರ್ವೇ ನಡೆಸಿ ನಿಖರವಾದ ವರದಿ ತರಿಸಿಕೊಳ್ಳಬೇಕು” ಎಂದು ಸೂಚಿಸಿದರು.

ಮಹೇಶ್ವರಿ ವಾಲಿ ಭರವಸೆ ನೀಡುತ್ತಾ, “ಮೊದಲು ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರ ಬಿಡುಗಡೆ ಮಾಡಲಿ. ನಂತರ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ನೆರವು ಒದಗಿಸಲು ನಮ್ಮ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮೂಲಕ ಮನವರಿಕೆ ಮಾಡಲಾಗುವುದು. ಸರ್ಕಾರ ವಿಳಂಬ ಮಾಡಿದರೆ ಜೆಡಿಎಸ್ ಚಳವಳಿ ಆರಂಭಿಸುವ ಸಾಧ್ಯತೆ ಇದೆ” ಎಂದು ಎಚ್ಚರಿಕೆ ನೀಡಿದರು.

ಹಾಜರಿದ್ದ ರೈತ ಮಹಿಳೆಯರು ಸಹ “ನಾವು ಭಾರೀ ನಷ್ಟ ಅನುಭವಿಸಿದ್ದೇವೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹ ವ್ಯಕ್ತಪಡಿಸಿದರು.

Leave A Reply

Your email address will not be published.