Shubhashaya News

ನೀರು, ರಸ್ತೆ, ಚರಂಡಿ, ವಿದ್ಯುತ್, ಶೌಚಾಲಯ ಸೌಲಭ್ಯಕ್ಕೆ ಜನರ ಬೇಡಿಕೆ

ಪುರಸಭೆಯಿಂದ ಬಜೆಟ್ ಪೂರ್ವ ಸಾರ್ವಜನಿಕರ ಸಭೆ

ಚಿತ್ತಾಪುರ: ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಅಧ್ಯಕ್ಷ ಚಂದ್ರಶೇಖರ ಕಾಶಿ ಅಧ್ಯಕ್ಷತೆಯಲ್ಲಿ 2021-22ನೇ ಸಾಲಿನ ಬಜೆಟ್ ಪೂರ್ವ ಸಾರ್ವಜನಿಕ ಸಭೆ ನಡೆಯಿತು.

ಪುರಸಭೆಯ 2021-22ನೇ ಸಾಲಿನ ಬಜೆಟ್ ಮಂಡಿಸುವ ಪೂರ್ವ ಸಾರ್ವಜನಿಕರ, ಸಂಘ ಸಂಸ್ಥೆಗಳ ಸಭೆ ನಡೆಸಿ ಜನರ ಬೇಡಿಕೆಗಳನ್ನು ಲಿಖಿತ ಮತ್ತು ಮೌಖಿಕವಾಗಿ ಆಲಿಸಲಾಯಿತು.
ಪಟ್ಟಣದಲ್ಲಿ ಸಾರ್ವಜನಿಕರಿಗೆ ಅವಶ್ಯಕತೆ ಇರುವ ಕಡೆಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಉತ್ತಮ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಿಸಬೇಕು. ಕುಡಿಯುವ ನೀರು ಎಲ್ಲ ವಾರ್ಡ್‍ಗಳಿಗೆ ಸಮರ್ಪಕವಾಗಿ ಪೂರೈಕೆ ಮಾಡಬೇಕು. ವಿದ್ಯುತ್ ದೀಪಗಳ ನಿರ್ವಹಣೆ ಸರಿಯಾಗಿ ಮಾಡಿ ರಾತ್ರಿ ಸಮಸ್ಯೆ ಆಗದಂತೆ ಆದ್ಯತೆ ನೀಡಬೇಕು ಎಂದು ಜನರು ಮನವಿ ಮಾಡಿದರು.
ಪಟ್ಟಣದ ವಿವಿಧ ವಾರ್ಡ್‍ಗಳ ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ಇಲ್ಲದ ಕುಟುಂಬದ ಮಹಿಳೆಯರಿಗೆ ಶೌಚದ ಸಮಸ್ಯೆ ಇದೆ. ಸರಿಯಾದ ಸೌಲಭ್ಯ ಇಲ್ಲ. ಮಹಿಳೆಯರ ಅನುಕೂಲಕ್ಕೆ ಸಾಮೂಹಿಕ ಶೌಚಾಲಯ ನಿರ್ಮಿಸಬೇಕು. ಇರುವ ಶೌಚಾಲಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿ ಅನುಕೂಲ ಮಾಡಿಕೊಡಬೇಕು ಎಂದು ಜನರು ಆಗ್ರಹಿಸಿದರು.
ಸಭೆಯಲ್ಲಿ ಭಾಗವಹಿಸಿದ ಪಟ್ಟಣದ ರಾಜು ರಾಠೋಡ, ಗೌರಿಶಂಕರ ಬಂಡಿ, ಸೋಮಶೇಖರ, ರವಿ ಇವಣಿ, ಶಿವರಾಜ ಕಲ್ಲಕ್, ನಜೀರ್ ಆಡಕಿ ಅವರು ಮಾತನಾಡಿ, ಪಟ್ಟಣದ ಎಲ್ಲ ವಾರ್ಡ್‍ಗಳ ಜನರ ಸಮಸ್ಯೆಗಳ ಪರಿಹಾರ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್ ಪತ್ರದಲ್ಲಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಮಾತನಾಡಿ, ಸಾರ್ವಜನಿಕರು ಸೂಚಿಸಿರುವ ಕಾಮಗಾರಿ ಮತ್ತು ಮೂಲಸೌಲಭ್ಯ ಕುರಿತು ಹೇಳಿರುವುದು ಉತ್ತಮ ಬೆಳವಣಿಗೆಯಾಗಿದೆ. ಬಜೆಟ್ ಪತ್ರದಲ್ಲಿ ಆದ್ಯತೆಯ ಮೇರೆಗೆ ಕಾಮಗಾರಿ ಅಳವಡಿಸಿ ವರ್ಷದೊಳಗೆ ಪೂರೈಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಕ್ರಾಂತಿಕುಮಾರಿ ಇದ್ದರು.
ಸಾಬಣ್ಣ ನಿರೂಪಿಸಿದರು.

Comments are closed.

Don`t copy text!