ಜಾಮೀನು ಪ್ರಕ್ರಿಯೆಗಳನ್ನು ಪತಿಯು ಪತ್ನಿಗೆ ಜೀವನಾಂಶ ನೀಡುವಂತೆ ಒತ್ತಾಯಿಸುವ ವೇದಿಕೆಯನ್ನಾಗಿ ಬಳಸಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ದೇಶದ ನ್ಯಾಯಾಲಯಗಳಿಗೆ ಎಚ್ಚರಿಕೆ ನೀಡಿದ್ದು, ಅಂತಹ ವಿಷಯಗಳನ್ನು ಸೂಕ್ತ ಕಾನೂನು ವೇದಿಕೆಯ ಮೂಲಕವೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.
ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣವೊಂದರಲ್ಲಿ ಕುಟುಂಬದ ನಾಲ್ವರು ಸದಸ್ಯರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದ್ದ ಆದೇಶವನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು, ಬಂಧನ ಪೂರ್ವ ರಕ್ಷಣೆ ನೀಡುವ ಪ್ರಕ್ರಿಯೆಯನ್ನು ಜೀವನಾಂಶ ಕೊಡಿಸುವ ಸಾಧನವನ್ನಾಗಿ ಮಾರ್ಪಡಿಸಬಾರದು ಎಂದು ಅಭಿಪ್ರಾಯಪಟ್ಟಿದೆ. ಜಾಮೀನಿಗೆ ವಿಧಿಸಬಹುದಾದ ನ್ಯಾಯಸಮ್ಮತ ಷರತ್ತುಗಳು ಮತ್ತು ದಾಂಪತ್ಯ ಕಲಹದ ಸಂದರ್ಭದಲ್ಲಿ ಸಂಗಾತಿಯು ಆರ್ಥಿಕ ನೆರವು ಪಡೆಯಲು ಇರುವ ಪ್ರತ್ಯೇಕ ಕಾನೂನು ಪರಿಹಾರಗಳ ನಡುವಿನ ವ್ಯತ್ಯಾಸವನ್ನು ನ್ಯಾಯಪೀಠ ಈ ಆದೇಶದ ಮೂಲಕ ಪುನರುಚ್ಚರಿಸಿದೆ.
ತಮಿಳುನಾಡಿನಲ್ಲಿ ಪತಿ ಹಾಗೂ ಆತನ ಸಂಬಂಧಿಕರ ವಿರುದ್ಧ ಕೌಟುಂಬಿಕ ಕ್ರೌರ್ಯ, ಅಕ್ರಮ ಬಂಧನ, ಕ್ರಿಮಿನಲ್ ಬೆದರಿಕೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ದೂರು ದಾಖಲಾಗಿತ್ತು. ದೂರುದಾರರು ಪತಿಯ ಕುಟುಂಬದ ನಾಲ್ವರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದರಿಂದ ಅವರು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರು. 2022ರ ಅಕ್ಟೋಬರ್ 7ರಂದು ಅವರಿಗೆ ಜಾಮೀನು ನೀಡಿದ್ದ ಹೈಕೋರ್ಟ್, ಜಾಮೀನು ಅರ್ಜಿದಾರರೇ ಅಲ್ಲದ ಹಾಗೂ ವಿದೇಶದಲ್ಲಿ ವಾಸವಿದ್ದ ಪತಿಗೆ ಆರು ತಿಂಗಳೊಳಗೆ ಭಾರತಕ್ಕೆ ಮರಳುವಂತೆ ಮತ್ತು ಪ್ರತಿ ತಿಂಗಳು ರೂ. 20,000 ಮಧ್ಯಂತರ ಜೀವನಾಂಶ ನೀಡುವಂತೆ ನಿರ್ದೇಶಿಸಿತ್ತು. ಪತಿ ಭಾರತಕ್ಕೆ ಮರಳದಿದ್ದಾಗ ಮತ್ತು ಜೀವನಾಂಶ ಪಾವತಿಸದಿದ್ದಾಗ, ಹೈಕೋರ್ಟ್ 2025ರ ನವೆಂಬರ್ 27ರಂದು ಆ ನಾಲ್ವರು ಸಂಬಂಧಿಕರ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿತ್ತು.
ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಜಾಮೀನು ಪ್ರಕ್ರಿಯೆಯಲ್ಲಿ ಭಾಗಿಯಾಗದ ಮತ್ತು ತಮ್ಮ ನಿಯಂತ್ರಣದಲ್ಲಿಲ್ಲದ ವ್ಯಕ್ತಿಯ ನಡವಳಿಕೆಗೆ ನಾಲ್ವರು ಆರೋಪಿಗಳನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಜೀವನಾಂಶ ಪಾವತಿಯಂತಹ ಷರತ್ತುಗಳನ್ನು ವಿಧಿಸಲು ಪ್ರತ್ಯೇಕ ವೇದಿಕೆ ಮತ್ತು ಕಾರ್ಯವಿಧಾನಗಳಿವೆ ಎಂದು ನ್ಯಾಯಾಲಯ ತಿಳಿಸಿದೆ. ವಿದೇಶದಲ್ಲಿರುವ ಪತಿ ಭಾರತಕ್ಕೆ ಬರದಿದ್ದರೆ ಅಥವಾ ಹಣ ನೀಡದಿದ್ದರೆ ಅದಕ್ಕೆ ಕುಟುಂಬದ ಇತರ ಸದಸ್ಯರು ಜವಾಬ್ದಾರರಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್, ಪತಿಯ ಕುರಿತಾದ ಷರತ್ತುಗಳನ್ನು ಕೈಬಿಟ್ಟು ನಾಲ್ವರು ಸಂಬಂಧಿಕರ ನಿರೀಕ್ಷಣಾ ಜಾಮೀನನ್ನು ಮರುಸ್ಥಾಪಿಸಿದೆ ಮತ್ತು ವಿಚಾರಣಾ ನ್ಯಾಯಾಲಯಕ್ಕೆ ನಿಗದಿತ ದಿನಾಂಕಗಳಂದು ಹಾಜರಾಗುವಂತೆ ಸೂಚಿಸಿದೆ.