Shubhashaya News

ಪಂಡಿತ್ ಜವಾಹರಲಾಲ್ ನೆಹರು ಅವರ 137ನೇ ಜನ್ಮದಿನ: ಪ್ರಧಾನಿ ಮೋದಿ, ರಾಜನಾಥ್ ಸಿಂಗ್ ಗೌರವ ನಮನ!

ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ 137ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗೌರವ ನಮನ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (X) ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಸಹ ದೇಶದ ಮೊದಲ ಪ್ರಧಾನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದು, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರ ಕೊಡುಗೆ ಮತ್ತು ಸ್ವತಂತ್ರ ಭಾರತದ ಆರಂಭಿಕ ವರ್ಷಗಳಲ್ಲಿ ಅವರ ನಾಯಕತ್ವವು ದೇಶದ ಮೇಲೆ ಶಾಶ್ವತ ಛಾಪು ಮೂಡಿಸಿದೆ ಎಂದು ಸ್ಮರಿಸಿದ್ದಾರೆ.

ಮಕ್ಕಳ ಮೇಲಿನ ಅಪಾರ ಪ್ರೀತಿಯಿಂದಾಗಿ ‘ಚಾಚಾ ನೆಹರು’ ಎಂದೇ ಜನಪ್ರಿಯರಾಗಿದ್ದ ನೆಹರು ಅವರ ಜನ್ಮದಿನವಾದ ನವೆಂಬರ್ 14 ಅನ್ನು ದೇಶಾದ್ಯಂತ ‘ಮಕ್ಕಳ ದಿನಾಚರಣೆ’ಯಾಗಿ ಆಚರಿಸಲಾಗುತ್ತದೆ. 1889ರ ನವೆಂಬರ್ 14ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನಿಸಿದ ನೆಹರು, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು 1947ರ ಆಗಸ್ಟ್ 15ರಂದು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 1964ರ ಮೇ 27ರಂದು ಅವರು ನಿಧನರಾದರು.

1956ಕ್ಕೂ ಮುನ್ನ ವಿಶ್ವಸಂಸ್ಥೆ ಘೋಷಿಸಿದ್ದಂತೆ ನವೆಂಬರ್ 20ರಂದು ಭಾರತದಲ್ಲಿ ಮಕ್ಕಳ ದಿನವನ್ನು ಆಚರಿಸಲಾಗುತ್ತಿತ್ತು. ಆದರೆ 1964ರಲ್ಲಿ ನೆಹರು ಅವರ ನಿಧನದ ನಂತರ, ಅವರ ಜನ್ಮದಿನವಾದ ನವೆಂಬರ್ 14 ಅನ್ನು ರಾಷ್ಟ್ರೀಯ ಮಕ್ಕಳ ದಿನವನ್ನಾಗಿ ಆಚರಿಸಲು ಸಂಸತ್ತು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು. ಈ ದಿನದ ಅಂಗವಾಗಿ ದೇಶಾದ್ಯಂತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಆಟೋಟಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸರ್ಕಾರಿ ಸಂಸ್ಥೆಗಳಲ್ಲೂ ನೆಹರು ಅವರ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

 

Leave A Reply

Your email address will not be published.