ರಾಜ್ಯದ ಜನತೆಗೆ KMF ಶಾಕ್ ಮೇಲೆ ಶಾಕ್ : ಹಾಲು, ಮೊಸರಿನ ಬೆನ್ನಲ್ಲೆ, ತುಪ್ಪ, ಬೆಣ್ಣೆ, ಪನ್ನೀರ್ ಬೆಲೆ ದಿಢೀರ್ ಏರಿಕೆ!
ರಾಜ್ಯದಲ್ಲಿ ಈಗಾಗಲೇ ಹಾಲು ಮತ್ತು ಮೊಸರಿನ ದರ ಹೆಚ್ಚಿಸಿ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದ್ದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF), ಇದೀಗ ನಂದಿನಿ ಉತ್ಪನ್ನಗಳಾದ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ದರವನ್ನು ಸಹ ದಿಢೀರ್ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ. ನಿತ್ಯಬಳಕೆಯ ಹಾಲಿನ ಉತ್ಪನ್ನಗಳ ದರ ಏರಿಕೆಯಿಂದಾಗಿ ಕಷ್ಟಪಟ್ಟು ಬದುಕು ಸಾಗಿಸುತ್ತಿರುವ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರಿಗೆ ಮತ್ತಷ್ಟು ಆರ್ಥಿಕ ಹೊರೆ ಉಂಟಾಗಿದೆ.
ನಂದಿನಿ ತುಪ್ಪ ಮತ್ತು ಪನ್ನೀರ್ ದರದಲ್ಲಿ ಭಾರಿ ಏರಿಕೆ: ಪರಿಷ್ಕೃತ ದರಗಳ ಪ್ರಕಾರ, ನಂದಿನಿ ತುಪ್ಪದ ಬೆಲೆ ಪ್ರತಿ ಲೀಟರ್ಗೆ 750 ರೂಪಾಯಿಯಿಂದ ಬರೋಬ್ಬರಿ 850 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಸ್ಯಾಚೆಟ್ ತುಪ್ಪ (1 ಲೀಟರ್) 715 ರೂ. ನಿಂದ 850 ರೂ.ಗೆ ಹಾಗೂ ಪೆಟ್ ಜಾರ್ (1 ಲೀಟರ್) 735 ರೂ. ನಿಂದ 870 ರೂ.ಗೆ ಹೆಚ್ಚಳಗೊಂಡಿದೆ. ಇನ್ನು ವಾಣಿಜ್ಯ ಬಳಕೆಗೆ ಹೆಚ್ಚಾಗಿ ಉಪಯೋಗಿಸುವ 15 ಕೆಜಿಯ ತುಪ್ಪದ ಟಿನ್ ಬೆಲೆ 11,625 ರೂಪಾಯಿಯಿಂದ 14,100 ರೂಪಾಯಿಗೆ ಜಿಗಿದಿದೆ. ಇದರೊಂದಿಗೆ ನಂದಿನಿ ಪನ್ನೀರ್ ಬೆಲೆಯೂ ಕೂಡ ಪ್ರತಿ ಕೆಜಿಗೆ 408 ರೂಪಾಯಿಯಿಂದ 485 ರೂಪಾಯಿಗೆ ಏರಿಕೆ ಕಂಡಿದೆ.
ಬೆಣ್ಣೆ ಬೆಲೆಯಲ್ಲೂ ಹೆಚ್ಚಳ — ಇಂದಿನಿಂದಲೇ ಜಾರಿ: ಇತ್ತ ಬೆಣ್ಣೆ ಪ್ರಿಯರಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಬೆಣ್ಣೆಯ ದರ 700 ರೂ. ನಿಂದ 780 ರೂ.ಗೆ ಏರಿಕೆಯಾಗಿದೆ. 500 ಗ್ರಾಂ ಉಪ್ಪು ಸಹಿತ ಬೆಣ್ಣೆಯ ಬೆಲೆ 310 ರೂ. ನಿಂದ 380 ರೂ.ಗೆ ಹಾಗೂ ಉಪ್ಪಿಲ್ಲದ 500 ಗ್ರಾಂ ಬೆಣ್ಣೆ ಬೆಲೆ 330 ರೂ. ನಿಂದ 390 ರೂ.ಗೆ ಏರಿಕೆಯಾಗಿದೆ. 200 ಗ್ರಾಂ ಉಪ್ಪಿಲ್ಲದ ಬೆಣ್ಣೆಯ ಬೆಲೆ 135 ರೂ. ನಿಂದ 160 ರೂ.ಗೆ ಹಾಗೂ ಬೆಣ್ಣೆ ಬ್ಲಿಸ್ಟರ್ ಪ್ಯಾಕ್ ದರ 80 ರೂ. ನಿಂದ 90 ರೂಪಾಯಿಗೆ ಹೆಚ್ಚಳವಾಗಿದೆ. ಕೆಎಂಎಫ್ ಘೋಷಿಸಿರುವ ಈ ನೂತನ ಹಾಗೂ ಪರಿಷ್ಕೃತ ದರಗಳು ಇಂದಿನಿಂದಲೇ ರಾಜ್ಯಾದ್ಯಂತ ಜಾರಿಗೆ ಬರಲಿವೆ.