ಕಲಬುರಗಿ: ನಂದಿನಿ ಹಾಲಿನ ಬೆಲೆಯನ್ನು ನ. 1ರಿಂದ ಪ್ರತಿ ಲೀಟರ್ಗೆ ಎಂಟು ರೂ. ಹೆಚ್ಚಳದ ನಿರ್ಧಾರ ಜನ ವಿರೋಧಿ ನೀತಿ ಎಂದು ಭಾರತೀಯ ಜನತಾ ಪಾರ್ಟಿಯ ಕೈಗಾರಿಕಾ ಪ್ರಕೋಷ್ಠಕ ಸಹ ಸಂಚಾಲಕರಾದ ಮಲ್ಲಿಕಾರ್ಜುನ ಮರತೂರಕರ್ ದೂರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ರೈತರನ್ನು ಪ್ರೋತ್ಸಾಹಿಸುವ ನೆಪದಲ್ಲಿ ರಾಜ್ಯ ಸರ್ಕಾರ ಹಾಲಿನ ಬೆಲೆ ಏರಿಸುವ ನಿರ್ಧಾರ ತೆಗೆದು ಕೊಂಡು ಜನ ಸಾಮಾನ್ಯರು, ಮಧ್ಯಮ ಹಾಗೂ ಬಡ ವರ್ಗದವರಿಗೆ ಆರ್ಥಿಕ ಹೊರೆ ಹೇರಿದೆ. ದಿನಗೂಲಿ ಕಾರ್ಮಿಕರು,ಆಟೋ ಚಾಲಕರು, ಸಣ್ಣ ವ್ಯಾಪಾರಿಗಳು ಕಡಿಮೆ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿರುವವರಿಗೆ ಹಾಲಿನ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.ಹಾಲು ಪ್ರತಿಯೊಂದು ಕುಟುಂಬದ ನಿತ್ಯ ಬಳಕೆಯ ಅಗತ್ಯ ವಸ್ತುವಾಗಿದೆ. ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಲಿನ ದರ ಹೆಚ್ಚಿಸಿರುವುದು ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು ಹಾಗೂ ರೈತ ಕುಟುಂಬಗಳ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಉಂಟು ಮಾಡಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಾಲಿನ ದರ ಏರಿಕೆಯಿಂದ ಮಕ್ಕಳ ಪೌಷ್ಟಿಕ ಆಹಾರದ ಮೇಲೂ ಪರಿಣಾಮ ಬೀರಲಿದೆ.ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುವ ಕುಟುಂಬಗಳಿಗೆ ಪ್ರತಿನಿತ್ಯ ಖರೀದಿಸುವುದೇ ಹೊರೆಯಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಹಾಲು ಉತ್ಪಾದಕರು, ರೈತರು ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಬೇಕಾದ ಸರ್ಕಾರವೇ ಹೊರೆಯಾಗುವ ಕೈಗೊಂಡಿರುವುದು ಸರಿಯಲ್ಲ ಎಂದು ಅವರು ಟೀಕಿಸಿದರು.
Next Post