ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆಸಲಾಗಿದೆ ಎನ್ನಲಾದ ನಕಲಿ ಸ್ಟಿಂಗ್ ಆಪರೇಷನ್ ಮತ್ತು ತಪ್ಪು ಮಾಹಿತಿ ಹರಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಸುದ್ದಿ ವಾಹಿನಿ ಕಚೇರಿಯ ಮೇಲೆ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ಆರಂಭಿಸಿದ್ದಾರೆ. ನ್ಯಾಯಾಲಯದಿಂದ ಅಧಿಕೃತ ಸರ್ಚ್ ವಾರೆಂಟ್ ಪಡೆದುಕೊಂಡಿರುವ ಸಿಸಿಬಿ ಅಧಿಕಾರಿಗಳು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು, ವಿಡಿಯೋ ದೃಶ್ಯಾವಳಿಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳ ಹುಡುಕಾಟಕ್ಕಾಗಿ ಈ ದಾಳಿ ನಡೆಸಲಾಗಿದೆ.
ಈ ಬೃಹತ್ ಕಾರ್ಯಾಚರಣೆಯಲ್ಲಿ 30ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಸಕ್ರಿಯವಾಗಿ ಭಾಗವಹಿಸಿದೆ. ಖಾಸಗಿ ಸುದ್ದಿ ವಾಹಿನಿಯ ಪ್ರಮುಖ ವಿಭಾಗಗಳು, ಎಡಿಟಿಂಗ್ ರೂಮ್ ಹಾಗೂ ತಾಂತ್ರಿಕ ಘಟಕಗಳನ್ನು ಸಿಸಿಬಿ ತಂಡ ಪರಿಶೀಲನೆಗೆ ಒಳಪಡಿಸಿದ್ದು, ವಿಡಿಯೋ ಪ್ರಸಾರ ಮತ್ತು ಅದರ ಮೂಲಕ್ಕೆ ಸಂಬಂಧಿಸಿದ ಪ್ರಮುಖ ಡಿಜಿಟಲ್ ಪುರಾವೆಗಳನ್ನು ವಶಕ್ಕೆ ಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿದೆ.
ಮತ್ತೊಂದೆಡೆ, ಸಿಸಿಬಿ ಪೊಲೀಸರು ತಮ್ಮ ತನಿಖೆಯ ಭಾಗವಾಗಿ ಸಹಕಾರ ನಗರದಲ್ಲಿರುವ ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥನ ಮನೆ ಮೇಲೆಯೂ ದಾಳಿ ನಡೆಸಿದ್ದಾರೆ. ಸುದ್ದಿ ವಾಹಿನಿ ಮುಖ್ಯಸ್ಥನ ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದ ಶಂಕಿತ ಸಂಪರ್ಕಗಳು ಮತ್ತು ಎಲೆಕ್ಟ್ರಾನಿಕ್ ದಾಖಲೆಗಳ ಸಂಗ್ರಹದಲ್ಲಿದ್ದಾರೆ. ಪ್ರಕರಣದಲ್ಲಿ ನಕಲಿ ವಿಡಿಯೋ ಸೃಷ್ಟಿ, ಶೇರ್ ಹಾಗೂ ಪ್ರಸಾರದ ಹಿಂದಿರುವ ಜಾಲದ ತನಿಖೆಯನ್ನು ಸಿಸಿಬಿ ಇನ್ನಷ್ಟು ಚುರುಕುಗೊಳಿಸಿದೆ.