ಅಫಜಲಪುರ: ತಾಲೂಕಿನ ಅತನೂರ ಗ್ರಾಮದ ರೈತ ಅನಿಕೇತ್ ಕರಣಕುಮಾರ್ ಬನಗಾರ್ ಅವರಿಗೆ ಸೇರಿದ ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ರೈತ ಕಂಗಾಲಾಗಿದ್ದಾರೆ.
ಗ್ರಾಮದ ಸರ್ವೇ ನಂಬರ್ 133 ಹಿಸ್ಸಾ 3ರಲ್ಲಿರುವ 5 ಎಕರೆ 32 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ.
ಬೆಂಕಿ ನಂದಿಸಲು ಮುಂದಾದ ರೈತ ಅನಿಕೇತ್ ಬನಗಾರ್ ಅವರಿಗೆ ಮೈಕೈಗೆ ಅಲ್ಪಸ್ವಲ್ಪ ಸುಟ್ಟ ಗಾಯಗಳಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಈ ಕುರಿತು ರೈತ ಅನಿಕೇತ್ ಬನಗಾರ್ ಮಾತನಾಡಿ, “ಈಗಾಗಲೇ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿದೆ. ಇಂತಹ ಸಂಕಷ್ಟದ ನಡುವೆಯೂ ಸ್ವಲ್ಪ ನೀರಿನಲ್ಲೇ ಕಷ್ಟಪಟ್ಟು ಕಬ್ಬು ಬೆಳೆಸಿದ್ದೆ. ಇನ್ನೇನು ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಾಗಿತ್ತು. ಆದರೆ ಬೆಂಕಿ ತಗುಲಿ ಇಡೀ ಬೆಳೆ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿ ಬರದಂತಾಗಿದೆ” ಎಂದು ಅಳಲು ತೋಡಿಕೊಂಡ ಅವರು ಜಮೀನಿನಲ್ಲಿದ್ದ ಸೋಲಾರ, ಹಾಗೂ ಪೈಪಗಳು ಕೃಷಿ ಸಲಕರಣೆಗಳು ಕೂಡ ಸುಟ್ಟು ಹಾನಿಯಾಗಿವೆ ಎಂದರು.
ಕಬ್ಬು ಬೆಳೆ ನಾಶದಿಂದ ಸಂಕಷ್ಟಕ್ಕೀಡಾಗಿರುವ ರೈತನಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಈ ಘಟನೆ ರೇವೂರ ಬಿ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.