Shubhashaya News

ಜೋಡೆತ್ತಿನ ಕೃಷಿಕರಿಗೆ 11 ಸಾವಿರ ರೂ. ಮಾಸಿಕ ಪ್ರೋತ್ಸಾಹಧನ ನೀಡಿ

ರಾಜ್ಯ ಬಜೆಟ್‌ನಲ್ಲಿ ಶೇ.10ರಷ್ಟು ಅನುದಾನ ಮೀಸಲಿಡಲು ಆಗ್ರಹಿಸಿ 150ಕ್ಕೂ ಹೆಚ್ಚು ಎತ್ತಿನ ಬಂಡಿಗಳೊಂದಿಗೆ ರೈತರ ಪ್ರತಿಭಟನೆ

ಚಿಂಚೋಳಿ: ಜೋಡೆತ್ತಿನ ಕೃಷಿ ಪದ್ಧತಿಯನ್ನು ಉಳಿಸಿ ಬೆಳೆಸಲು ರಾಜ್ಯ ಬಜೆಟ್‌ನಲ್ಲಿ ಶೇ.10ರಷ್ಟು ಅನುದಾನ ಮೀಸಲಿಡುವ ಕಾನೂನು ಜಾರಿಗೆ ತರಬೇಕು ಹಾಗೂ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು 11 ಸಾವಿರ ರೂ. ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ಚಿಂಚೋಳಿ ಮತ್ತು ಕಾಳಗಿ ತಾಲೂಕು ಘಟಕಗಳ ನೇತೃತ್ವದಲ್ಲಿ ರೈತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂದಿ ಕೃಷಿ ಸಂಸ್ಕೃತಿಯ ಪುನಶ್ಚೇತನಕ್ಕಾಗಿ ವಿಶೇಷ ಕಾನೂನು ಜಾರಿಗೆ ತರಬೇಕು ಎಂಬ ಹಕ್ಕೊತ್ತಾಯದೊಂದಿಗೆ 150ಕ್ಕೂ ಹೆಚ್ಚು ಎತ್ತಿನ ಬಂಡಿಗಳಲ್ಲಿ ಆಗಮಿಸಿದ ರೈತರು ಸರ್ಕಾರದ ಗಮನ ಸೆಳೆದರು.

ಸಂಘದ ಅಧ್ಯಕ್ಷ ವಿರಣ್ಣ ಗಂಗಾಣಿ ಮಾತನಾಡಿ, ಎತ್ತಿನ ನೇಗಿಲಿನಿಂದ ಉಳುಮೆ ಮಾಡುವ ರೈತರು ಮಣ್ಣು ಮತ್ತು ಪ್ರಕೃತಿಯ ಸಂರಕ್ಷಣೆಯೊಂದಿಗೆ ನಾಗರಿಕತೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇಂತಹ ಕೃಷಿಕರನ್ನು ನೇಗಿಲಯೋಗಿಗಳು ಎಂದು ಗೌರವಿಸಬೇಕು. ಆದರೆ, ಜೋಡೆತ್ತಿನ ಕೃಷಿಯ ಮಹತ್ವವನ್ನು ನಿರ್ಲಕ್ಷಿಸುತ್ತಿರುವುದರಿಂದ ಸಾಂಪ್ರದಾಯಿಕ ಕೃಷಿ ಪದ್ಧತಿ ಅವನತಿಯತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸ್ವಾತಂತ್ರ್ಯಪೂರ್ವದಲ್ಲಿ ಮಣ್ಣಿನ ಸರಾಸರಿ ಸಾವಯವ ಇಂಗಾಲದ ಪ್ರಮಾಣ ಶೇ.1ರಷ್ಟಿತ್ತು. ಇದೀಗ ಅದು ಶೇ.0.33ಕ್ಕೆ ಕುಸಿದಿದೆ. ಮಣ್ಣಿನ ಫಲವತ್ತತೆ ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾಗಿರುವ ನೈಸರ್ಗಿಕ ಕೃಷಿ ಪದ್ಧತಿಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಜ್ಞಾನಯೋಗಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಮತ್ತು ಕೃಷಿ ಪದವೀಧರರು ಆರಂಭಿಸಿರುವ ನಂದಿ ಕೂಗು ಅಭಿಯಾನದ ಮೂಲಕ ಕಳೆದ ಮೂರು ವರ್ಷಗಳಿಂದ ಎತ್ತಿನ ಕೃಷಿ ಸಂಸ್ಕೃತಿಯ ಉಳಿವಿಗಾಗಿ ಜನಜಾಗೃತಿ ಮೂಡಿಸಲಾಗುತ್ತಿದೆ. ಬಯಲುಸೀಮೆಯ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿಸಲು ಎಲ್ಲ ಸಮಾಜದ ಜನರು ಒಗ್ಗೂಡಿ ಈ ಸಂಸ್ಕೃತಿಯ ಪುನಶ್ಚೇತನಕ್ಕೆ ಮುಂದಾಗಬೇಕು ಎಂದು ಹೇಳಿದರು.

ನಂದಿ ಕೃಷಿ ಸಂಸ್ಕೃತಿಯ ಪುನಶ್ಚೇತನಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ಶೇ.10ರಷ್ಟು ಅನುದಾನ ಮೀಸಲಿಡಬೇಕು. ಜೋಡೆತ್ತಿನ ಕೃಷಿಕರಿಗೆ ಮಾಸಿಕ 11 ಸಾವಿರ ರೂ. ಪ್ರೋತ್ಸಾಹಧನ ನೀಡಬೇಕು. ಇದರ ಜೊತೆಗೆ ನಂದಿ ವಿದ್ಯುತ್, ಗ್ಯಾಸ್, ಅಡುಗೆ ಎಣ್ಣೆ, ಔಷಧ, ಗೊಬ್ಬರ ಹಾಗೂ ಗುಣಮಟ್ಟದ ಆಹಾರ ಉತ್ಪಾದನೆಗೆ ಉತ್ತೇಜನ ನೀಡುವ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ರೈತರು ಆಗ್ರಹಿಸಿದರು.

ಜೋಡೆತ್ತಿನ ಕೃಷಿಕರ ಬದುಕು ಹಾಗೂ ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಉಳಿಸುವ ಉದ್ದೇಶದಿಂದ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು. ರೈತರ ಬೇಡಿಕೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಚಿಮ್ಮಾಇದಲಾಯಿ ಮಠದ ಪೂಜ್ಯ ಶ್ರೀ ಮಹಾಂತೇಶ್ವರ ಶಿವಾಚಾರ್ಯರು, ನೀಡಗುಂದದ ಪೂಜ್ಯ ಶ್ರೀ ಕರುಣೇಶ್ವರ ಶಿವಾಚಾರ್ಯರು, ನರನಾಳದ ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯರು, ಚಂದನಕೇರಾದ ಪೂಜ್ಯ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಹಾಗೂ ಸುಲೆಪೇಟದ ಪೂಜ್ಯ ಶ್ರೀ ಪ್ರಭುದೇವರು ಉಪಸ್ಥಿತರಿದ್ದರು.

ರೈತ ಮುಖಂಡರಾದ ಗೌತಮ್ ಪಾಟೀಲ, ಗೋಪಾಲ್ ರಾವ್ ಕಟೀಮನಿ, ಸಂತೋಷ್ ಗಂಡಂತಿ, ರೇವಣಸಿದ್ದಪ್ಪ ಅರಣಕಲ್, ಹಣಮಂತ ಪೂಜಾರಿ, ಕೆ.ಎಂ. ಬಾರೀ, ಅಮರ್ ಲೋಡನೂರ, ಶಂಕರ್ ಅಲಾಪುರ, ಎಂ.ಪಿ. ಗೋಪಾಲ್, ರಾಮರೆಡ್ಡಿ ಪಾಟೀಲ, ಶರಣಪ್ಪ ಹಲಚೇರಿ, ವೀರೇಶ್ ಎಂಪಳ್ಳಿ, ಲೋಕೇಶ್ ಶೇಳಿಗಿ ಸೇರಿದಂತೆ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ರೈತರು, ವಿವಿಧ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave A Reply

Your email address will not be published.