Shubhashaya News

ಕ್ರೈಸ್ತ ಸಮುದಾಯದ ಬೇಡಿಕೆ ಈಡೇರಿಸಲು ಸಚಿವ ಖಾದರ್‌ಗೆ ಮನವಿ

KCCDCL ಅನುದಾನ ಹೆಚ್ಚಳ,ಕೆಕೆ ಭಾಗದ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ನೆರವಿಗೆ ಒತ್ತಾಯ

ಕರ್ನಾಟಕ ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮಕ್ಕೆ (KCCDCL) ಹೆಚ್ಚಿನ ಅನುದಾನ ನೀಡುವುದು ಸೇರಿದಂತೆ ಕ್ರೈಸ್ತ ಸಮುದಾಯದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರಿಗೆ ಅಖಿಲ ಭಾರತ ಕ್ರಿಸ್ತ ಮಹಾಸಭಾ ಹಾಗೂ ಕರ್ನಾಟಕ ಕ್ರೈಸ್ತ ರಕ್ಷಣಾ ವೇದಿಕೆ ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.

ಕಲಬುರಗಿ ಭೇಟಿಯ ಸಂದರ್ಭದಲ್ಲಿ ಸಚಿವರಿಗೆ ಮನವಿ ಸಲ್ಲಿಸಿದ ನಿಯೋಗ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ KCCDCL ಕಚೇರಿ ಸ್ಥಾಪಿಸಿ, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳು ಸುಲಭವಾಗಿ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿತು.

ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿನ ಕ್ರೈಸ್ತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅಭಿವೃದ್ಧಿ ಅನುದಾನ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಭಾಗದ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಕಳೆದ 125 ವರ್ಷಗಳಿಂದ ಬಡವರು ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. ಈ ಸಂಸ್ಥೆಗಳ ಸೇವೆಯನ್ನು ಪರಿಗಣಿಸಿ ಅವುಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ನೆರವು ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಇದಲ್ಲದೆ, ಕರ್ನಾಟಕ ಸರ್ಕಾರದ ವತಿಯಿಂದ ಕ್ರಿಸ್ಮಸ್ ಹಬ್ಬವನ್ನು ರಾಜ್ಯಮಟ್ಟದಲ್ಲಿ ಆಚರಿಸಬೇಕು ಹಾಗೂ ಕ್ರೈಸ್ತ ಸಮುದಾಯದ ಕಲ್ಯಾಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ 2025ರಿಂದ ಬಾಕಿ ಉಳಿದಿರುವ ಅರ್ಜಿಗಳು ಮತ್ತು ಪ್ರಸ್ತಾವನೆಗಳನ್ನು ತಕ್ಷಣ ಪರಿಶೀಲಿಸಿ ಅನುಮೋದನೆ ನೀಡಬೇಕು ಎಂದು ನಿಯೋಗ ಮನವಿ ಮಾಡಿದೆ.

ಸಮುದಾಯದ ಬಹುದಿನಗಳ ಬೇಡಿಕೆಗಳನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಿ, ವಿಶೇಷವಾಗಿ ಕಲ್ಯಾಣ ಕರ್ನಾಟಕದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಹಾಗೂ ಸಮುದಾಯದ ಕಲ್ಯಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವನ್ನು ನಿಯೋಗ ವ್ಯಕ್ತಪಡಿಸಿತು.

ಈ ಸಂದರ್ಭದಲ್ಲಿ ಫಾದರ್ ಸ್ಟ್ಯಾನ್ಲಿ ಲೋಬೂ, ಡಾ. ಕಿರಣ್ ಜಾರ್ಜ್, ಸ್ಯಾಂಡ್ಯರಾಜ್ ಸ್ಯಾಮುಯೆಲ್, ಲೂಯಿಸ್ ಕೋರಿ, ಗೊಂಡೇಶ್, ಪಾಸ್ಟರ್ ಮಣಿ ಸೇರಿದಂತೆ ಬೀದರ್ ಹಾಗೂ ಇತರ ಜಿಲ್ಲೆಗಳಿಂದ ಆಗಮಿಸಿದ್ದ ಪಾದ್ರಿಗಳು, ಕ್ರೈಸ್ತ ಮುಖಂಡರು ಮತ್ತು ಸಮುದಾಯದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave A Reply

Your email address will not be published.