ಕಲಬುರಗಿ: ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯು 13.98 ಕೋಟಿ ರೂ. ಬಂಡವಾಳ ಹೂಡಿಕೆಯ 4 ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದೆ.
ನೂತನ ಯೋಜನೆಗಳ ಅನುಮೋದನೆ ನೀಡಿದ್ದರಿಂದ ಭವಿಷ್ಯದಲ್ಲಿ 269 ಉದ್ಯೋಗ ಸೃಜನೆಗೆ ಅವಕಾಶ ದೊರೆತಂತಾಗಿದೆ. ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ದಿಸೆಯಲ್ಲಿ ಇನ್ನು ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯನಿರ್ವಹಿಸುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಡಿ.ಸಿ. ಸೂಚಿಸಿದರು.
ಇನ್ನು ನಂದೂರ-ಕೆಸರಟಗಿ 3ನೇ ಹಂತದ ಕೈಗಾರಿಕೆ ವಸಾಹತು ಪ್ರದೇಶದಲ್ಲಿ ಸುಮಾರು 2,000 ಉದ್ಯೋಗ ಸೃಜನೆಯ ಸಿದ್ದ ಉಡುಪಗಳ ತಯಾರಿಕಾ ಘಟಕ ಸ್ಥಾಪನೆಗೆ ಮೆ. ಶಾಹಿ ಎಕ್ಸಪೋರ್ಟ್ ಪ್ರೈ.ಲಿ ಸಂಸ್ಥೆಗೆ ಈಗಾಗಲೆ 16 ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ಇದಕ್ಕೆ ಪೂರಕವಾಗಿ ನೇಮಿಸಿಕೊಳ್ಳಬೇಕಾದ ಸಿಬ್ಬಂದಿಗಳಿಗೆ ತರಬೇತಿ ನೀಡಿ ಪಡೆಯಲು ಸದರಿ ಸಂಸ್ಥೆಗೆ ನಂದೂರ-ಕೆಸರಟಗಿ 2ನೇ ಹಂತದಲ್ಲಿರುವ ಟೈಸ್ ಅಡಿ ನಿರ್ಮಾಣಗೊಂಡಿರುವ ಪ್ಲಗ್ & ಪ್ಲೇ ಕಟ್ಟಡದ ನೆಲ ಮಹಡಿ ನೀಡಲು ಸಭೆ ಒಪ್ಪಿಗೆ ಸೂಚಿಸಿದೆ.
ಅದೇ ರೀತಿ ಪ್ಲಗ್ & ಪ್ಲೇ ಕಟ್ಟಡದ ಮೊದಲನೇ ಮಹಡಿಯನ್ನು ನವ ಉದ್ಯಮಿದಾರರಿಗೆ ನೆರವಾಗಲು ಪೂರಕವಾಗಲಿದೆ ಕರ್ನಾಟಕ ನಾವಿನ್ಯತೆ ಮತ್ತು ತಂತ್ರಜ್ಞಾನ ಲಿಮಿಟೆಡ್ (ಕಿಟ್ಸ್) ಸಂಸ್ಥೆಗೆ ನೀಡಲಾಗಿದೆ. ಇನ್ನು ಉತ್ಪಾದನಾ ಬದಲಾವಣೆಯ 10 ಪ್ರಕರಣಗಳಲ್ಲಿ ಸಂಬಮಧಪಟ್ಟವರಿಗೆ ಸಭೆಯಲ್ಲಿ ಸಂದರ್ಶನ ನಡೆಸಿ ಉತ್ಪಾದನಾ ಬದಲಾವಣೆಗೆ ಅನುಮೋದನೆ ನೀಡಲಾಯಿತು.
ಖಾಲಿ ನಿವೇಶನ ರದ್ದತಿಗೆ ಸೂಚನೆ:
ಜಿಲ್ಲೆಯ ಎಲ್ಲಾ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ನಿವೇಶನ ಪಡೆದು ಹಲವು ವರ್ಷಗಳಿಂದ ಯೋಜನೆ ಅನುಷ್ಠಾನಗೊಳಿಸದೇ ಖಾಲಿ ಇರುವ ನಿವೇಶನಗಳ ಸಮೀಕ್ಷೆ ಮಾಡಲಾಗಿದ್ದು, ಅದರಂತೆ ಖಾಲಿ ಇರುವ ನಿವೇಶನಗಳ ರದ್ದತಿಗೆ ನಿಯಮಾನುಸಾರ 1 ತಿಂಗಳ ಅವಧಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಕೆ.ಐ.ಎ.ಡಿ.ಬಿ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಅಂತಹ ರದ್ದುಪಡಿಸಿದ ನಿವೇಶನಗಳನ್ನು ಆಸಕ್ತವುಳ್ಳ ನವ ಉದ್ಯಮಿದಾರರಿಗೆ ಮರು ಹಂಚಿಕೆ ಮಾಡುವಂತೆ ನಿರ್ದೇಶಿಸಿದರು.
ಕೈಗಾರಿಕೆಗಳಿಗೆ ನೀರು,ಉದ್ಯಮಿಗಳ ಸಂತಸ:
ಕಲಬುರಗಿ ಜಿಲ್ಲೆಯಲ್ಲಿರುವ 1,919.21 ಎಕರೆ ವಿಸ್ತೀರ್ಣದ ಕಪನೂರ 1, 2 ಮತ್ತು 3ನೇ ಹಂತ ಮತ್ತು ನಂದೂರ-ಕೆಸರಟಗಿ 1 ಮತ್ತು 2ನೇ ಹಂತ ಹೀಗೆ ಒಟ್ಟು 9 ಕೆ.ಐ.ಎ.ಡಿ.ಬಿ. ಕೈಗಾರಿಕಾ ಪ್ರದೇಶ ಹಾಗೂ 4 ಕೆ.ಎಸ್.ಎಸ್.ಐ.ಡಿ.ಸಿ.ಕೈಗಾರಿಕಾ ವಸಾಹತುಗಳಲ್ಲಿರುವ ಸುಮಾರು 1,272 ಕೈಗಾರಿಕಾ ಘಟಕಗಳಿಗೆ ಬೆಣ್ಣೆತೋರಾ ಜಲಾಶಯದಿಂದ 20 ಎಂ.ಎಲ್.ಡಿ ನೀರನ್ನು ತರುವ 118 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಯನ್ನು ಕೆ.ಐ.ಎ.ಡಿ.ಬಿ. ಯಿಂದ ಅನುಷ್ಠಾನಗೊಳಿಸುತ್ತಿರುವುದಕ್ಕೆ ಸಭೆಯಲ್ಲಿ ಉಪಸ್ಥಿತರಿದ್ದ ಕೈಗಾರಿಕೋದ್ಯಮಿಗಳ ಪ್ರತಿನಿಧಿಗಳು ಸಂತಸ ವ್ಯಕ್ತಪಡಿಸಿ ಹಲವು ವರ್ಷಗಳ ಸಮಸ್ಯೆಗೆ ಮುಕ್ತಿ ಹಾಡಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಜಿಲ್ಲಾ ಕೈಗಾರಿಕಾ ಕೇಂದ್ರ, ಅಧಿಕಾರಿಗಳಾದ ರುಪಾಲಿ, ನಳಿನಿ ಹಾಗೂ ಜಾಫರ ಅನ್ಸಾರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕೈಗಾರಿಕಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.