Shubhashaya News

ಕಬ್ಬು, ತೊಗರಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹ:

ಜೇವರ್ಗಿ–ಯಡ್ರಾಮಿ ರೈತರಿಂದ ಹೆದ್ದಾರಿ ಬಂದ್

ಜೇವರ್ಗಿ: ಕಬ್ಬು ಮತ್ತು ತೊಗರಿ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸುವುದು ಹಾಗೂ ಭೀಮಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವಂತೆ ಆಗ್ರಹಿಸಿ ಜೇವರ್ಗಿ ಮತ್ತು ಯಡ್ರಾಮಿ ಅವಳಿ ತಾಲ್ಲೂಕುಗಳ ರೈತ ಹೋರಾಟಗಾರರು ಗುರುವಾರ ಜೇವರ್ಗಿ–ಶಹಾಪುರ ಮುಖ್ಯ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ರೈತರು ಬೆಳೆದ ಕಬ್ಬು ಮತ್ತು ತೊಗರಿಗೆ ನ್ಯಾಯಯುತ ಬೆಲೆ ದೊರೆಯಬೇಕು. ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಿನ ಕೊರತೆಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ದೊರೆಯದಿರುವುದು ಹಾಗೂ ನೀರಾವರಿಗೆ ಅಗತ್ಯವಾದ ನೀರಿನ ಲಭ್ಯತೆಯ ಕೊರತೆಯಿಂದ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಾಂತಗೌಡ ಪಾಟೀಲ್, ಮಲ್ಲನಗೌಡ ಕೆಲ್ಲೂರ್, ಬಿ.ಎಚ್. ಪಾಟೀಲ್, ಸಿದ್ದರಾಮಯ್ಯ ಕಟ್ಟಿ, ಜಯ ಕರ್ನಾಟಕ ಸಂಘಟನೆಯ ಮುಖಂಡರಾದ ಪರಮೇಶ್ವರ್ ಬಿರಾಳ, ದಾವೂದ್ ಹಾರ್ನೂರ್, ಟಿಪ್ಪು ಸಿಗರತಲ್ಲಿ, ಮಲ್ಲು ನೆದಲಗಿ ಸೇರಿದಂತೆ ಮಹಿಳಾ ರೈತ ಮೋರ್ಚಾದ ಮುಖಂಡರು ಹಾಗೂ ಅವಳಿ ತಾಲ್ಲೂಕುಗಳ ಅನೇಕ ರೈತರು ಭಾಗವಹಿಸಿದ್ದರು.

Leave A Reply

Your email address will not be published.