Shubhashaya News

ಬ್ರಿಟಿಷರನ್ನೇ ಬೆಚ್ಚಿಬೀಳಿಸಿದ ಲಚ್ಯಾಣದ ಬೆಳಗು

​ಉತ್ತರ ಕರ್ನಾಟಕದ ಮಣ್ಣಿನಲ್ಲಿ ಯಾವುದೋ ಅಗೋಚರ ಸೆಳೆತವಿದೆ. ಅಲ್ಲಿನ ಧೂಳಿನ ಕಣಕಣದಲ್ಲೂ ಅವಧೂತರ, ಶಿವಯೋಗಿಗಳ ಮತ್ತು ಶರಣರ ಉಸಿರಿದೆ. ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ ಭಾಗದ ಇತಿಹಾಸವನ್ನು ಕೆದಕಿದರೆ ಅಲ್ಲಿ ಅಧಿಕಾರದ ಗದ್ದುಗೆಗಳಿಗಿಂತ ಆಧ್ಯಾತ್ಮದ ಪೀಠಗಳೇ ಹೆಚ್ಚು ದೀಪ್ತಿಯಿಂದ ಬೆಳಗುತ್ತಿರುವುದು ಕಾಣುತ್ತದೆ. ಇಂತಹ ಪುಣ್ಯಭೂಮಿಯಲ್ಲಿ ಹತ್ತೊಂಬತ್ತನೇ ಶತಮಾನದಲ್ಲಿ ಅವತರಿಸಿದ ಅಪ್ರತಿಮ ತೇಜಸ್ಸು ಸುಕ್ಷೇತ್ರ ಲಚ್ಯಾಣದ ಲಿಂಗೈಕ್ಯ ಶ್ರೀ ಸಿದ್ಧಲಿಂಗ ಮಹಾರಾಜರು. ಸಾಮಾನ್ಯರ ಪಾಲಿಗೆ ಅವರು ಪವಾಡ ಪುರುಷರು. ಅಧ್ಯಾತ್ಮದ ಹಾದಿಯಲ್ಲಿ ನಡೆಯುವವರಿಗೆ ಅವರು ಜ್ಞಾನದ ಜೀವಂತ ದಾರಿದೀಪ.

​ಕ್ರಿಸ್ತಶಕ ೧೮೪೮. ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದ ಲಚ್ಚಪ್ಪ ಮತ್ತು ನಾಗಮ್ಮ ದಂಪತಿಯ ಪುಣ್ಯದ ಫಲವಾಗಿ ಶ್ರಾವಣ ಸೋಮವಾರದಂದು ಜನಿಸಿದ ಆ ಮಗುವಿಗೆ ‘ಅಮೋಘ ಸಿದ್ದ’ ಎಂಬ ನಾಮಕರಣವಾಯಿತು. ಹೆಸರು ಅಮೋಘ, ಆತನ ಮುಂದಿನ ಲೀಲೆಗಳೂ ಅಮೋಘ. ಹುಟ್ಟಿನಿಂದಲೇ ಪ್ರಾಪಂಚಿಕ ಜಂಜಾಟಗಳಿಂದ ದೂರವೇ ಉಳಿದ ಆ ಬಾಲಕನ ಕಣ್ಣುಗಳಲ್ಲಿ ಇಡೀ ಬ್ರಹ್ಮಾಂಡವನ್ನು ಶೋಧಿಸುವ ಅದ್ಭುತ ಕಾಂತಿ ಮನೆಮಾಡಿತ್ತು. ಜಗತ್ತು ಭೌತಿಕ ಸುಖಗಳ ಬೆನ್ನುಬಿದ್ದಾಗ, ಅಮೋಘ ಸಿದ್ದನಿಗೆ ಪ್ರಕೃತಿಯ ನಿಗೂಢ ರಹಸ್ಯಗಳೊಂದಿಗಿನ ಅನುಸಂಧಾನವೇ ಪ್ರಧಾನವಾಗಿತ್ತು.

​ಗುರು-ಶಿಷ್ಯ ಪರಂಪರೆಯಲ್ಲಿ ಅದ್ಭುತವಾದ ನಂಟು ಇರುತ್ತದೆ. ಯೋಗ್ಯ ಗುರುವಿಗೆ ತನ್ನ ಅಪ್ಪಟ ಶಿಷ್ಯನನ್ನು ಗುರುತಿಸುವ ದಿವ್ಯದೃಷ್ಟಿ ಹುಟ್ಟಿನಿಂದಲೇ ಸಿದ್ಧಿಸಿರುತ್ತದೆ. ಒಮ್ಮೆ ಬಂಥನಾಳ ಮಠದ ಗುರುಗಳಾದ ಶಂಕರಲಿಂಗ ಮಹಾಶಿವಯೋಗಿಗಳ ಎದುರು ಈ ಬಾಲಕನನ್ನು ಕರೆತರಲಾಯಿತು. ಆ ಕ್ಷಣದಲ್ಲಿ ಇಬ್ಬರೂ ಪರಸ್ಪರ ಕಣ್ಣುಗಳಲ್ಲೇ ಮಾತನಾಡಿಕೊಂಡರು. ಬಾಲಕನನ್ನು ದಿಟ್ಟಿಸಿ ನೋಡಿದ ಗುರುಗಳು “ನಿನ್ನ ಹೆಸರೇನು ಮಗು?” ಎಂದು ಕೇಳಿದರು. ಬಾಲಕ ಗಂಭೀರವಾಗಿ “ನನ್ನ ಹೆಸರು ಸಿದ್ದ” ಎಂದನು. ಬಂಥನಾಳದ ಗುರುಗಳ ಮುಖದಲ್ಲಿ ಮಂದಹಾಸ ಮೂಡಿತು. “ಹೌದಪ್ಪ, ನೀನು ಸಿದ್ದನೇ ಸರಿ. ನಿನ್ನ ಪ್ರತಿ ನುಡಿಯೂ ವೇದವಾಕ್ಯವಾಗುತ್ತದೆ. ಮೂರು ಲೋಕಗಳಲ್ಲಿ ವ್ಯಾಪಿಸಿರುವ ಅಪಾರ ಶಕ್ತಿಯನ್ನೊಳಗೊಂಡ ಸಿದ್ಧಿಪುರುಷ ನೀನು” ಎಂದು ಹರಸಿದರು. ಅಂದಿನಿಂದ ಆ ಬಾಲಕ ‘ಸಿದ್ಧಲಿಂಗ’ನಾಗಿ ರೂಪುಗೊಂಡ.

​ಸಿದ್ಧಲಿಂಗ ಮಹಾರಾಜರ ಜೀವನದುದ್ದಕ್ಕೂ ಅಸಂಖ್ಯಾತ ಪವಾಡಗಳ ಸರಮಾಲೆಯೇ ತೆರೆದುಕೊಳ್ಳುತ್ತದೆ. ಶ್ಯಾವಳ ಗ್ರಾಮದಲ್ಲಿ ಅವರು ದಿಢೀರನೆ ಹೆಬ್ಬುಲಿಯಾಗಿ ಕಾಣಿಸಿಕೊಂಡರು. ಜಿಗಜಿಣಗಿಯಲ್ಲಿ ಪುಟ್ಟ ಮಗುವಾಗಿ ನಕ್ಕರು. ತಡವಲಗಾ ಮತ್ತು ಲಚ್ಯಾಣದಲ್ಲಿ ಏಕಕಾಲಕ್ಕೆ ಅಗ್ನಿ ಪ್ರವೇಶ ಮಾಡಿ ಬೆರಗು ಮೂಡಿಸಿದರು. ಶ್ರೀಶೈಲದ ದಟ್ಟಾರಣ್ಯದಲ್ಲಿ ಸಾಮಾನ್ಯರಿಗೆ ಪ್ರವೇಶವೇ ಅಸಾಧ್ಯವಾದ ಕದಳಿಬನದ ಗುಹೆಯನ್ನು ಹೊಕ್ಕು ಧ್ಯಾನಮಗ್ನರಾದರು. ಮೇಲ್ನೋಟಕ್ಕೆ ಇವೆಲ್ಲವೂ ಭೌತಿಕ ಪವಾಡಗಳಂತೆ ಕಂಡರೂ, ಇವುಗಳ ಹಿಂದಿರುವ ದಾರ್ಶನಿಕ ಸತ್ಯ ಬೇರೆಯೇ ಇದೆ. ಇದು ಮನುಷ್ಯನ ಅಹಂಕಾರವನ್ನು ಅಳಿಸಿ, ಪ್ರಕೃತಿಯ ಮೇಲಿನ ಸೃಷ್ಟಿಕರ್ತನ ಸಂಪೂರ್ಣ ನಿಯಂತ್ರಣವನ್ನು ಸಾರುವ ಆಧ್ಯಾತ್ಮಿಕ ರೂಪಕಗಳು. ಪಂಚಭೂತಗಳೂ ಓರ್ವ ಯೋಗಿಯ ಇಚ್ಛಾಶಕ್ತಿಗೆ ತಲೆಬಾಗುತ್ತವೆ ಎಂಬುದಕ್ಕೆ ಈ ಲೀಲೆಗಳು ಜ್ವಲಂತ ಸಾಕ್ಷಿಯಾಗಿವೆ.

​ಈ ಪವಾಡಗಳ ಸರಣಿಯಲ್ಲಿ ಅತ್ಯಂತ ರೋಮಾಂಚಕ ಘಟನೆಯೊಂದು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ನಡೆಯಿತು. ಒಮ್ಮೆ ಇಬ್ಬರು ಸಾಧುಗಳು ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದರು. ಇದನ್ನು ಗಮನಿಸಿದ ಅಹಂಕಾರಿ ಬ್ರಿಟಿಷ್ ಟಿಕೆಟ್ ಕಲೆಕ್ಟರ್ ಆ ಸಾಧುಗಳ ಮೇಲೆ ದೌರ್ಜನ್ಯವೆಸಗಿ, ಬೆನ್ನಿಗೆ ಬಾಸುಂಡೆ ಬರುವಂತೆ ಬಾರಿಸಿದ. ಸಾಧುಗಳ ಮೈಮೇಲೆ ಬಿದ್ದ ಪ್ರತಿಯೊಂದು ಏಟು ದೂರದ ಲಚ್ಯಾಣದಲ್ಲಿದ್ದ ಸಿದ್ಧಲಿಂಗ ಮಹಾರಾಜರ ಬೆನ್ನಿನ ಮೇಲೆ ಮೂಡಿತು. ತಕ್ಷಣವೇ ಸಿದ್ಧಲಿಂಗರ ಸಂಕಲ್ಪ ಶಕ್ತಿ ಜಾಗೃತವಾಯಿತು. ಯಂತ್ರದ ಬಲದಿಂದ ಅತಿ ವೇಗವಾಗಿ ಓಡುತ್ತಿದ್ದ ಆ ಬೃಹತ್ ರೈಲು ಇದ್ದಕ್ಕಿದ್ದಂತೆ ಸ್ತಬ್ಧವಾಯಿತು. ಬ್ರಿಟಿಷ್ ಅಧಿಕಾರಿಗಳು ಬೆಚ್ಚಿಬಿದ್ದರು. ಇಂಜಿನಿಯರ್‌ಗಳು ಎಷ್ಟೇ ಪ್ರಯತ್ನಿಸಿದರೂ ರೈಲು ಇಂಚೂ ಕದಲಲಿಲ್ಲ. ಅಂತಿಮವಾಗಿ ಇದು ಅವಧೂತರ ಶಾಪದ ಫಲ ಎಂದು ಅರಿತ ಬ್ರಿಟಿಷ್ ಅಧಿಕಾರಿಗಳು ಶರಣಾಗತರಾದರು. ಇದು ಭೌತಿಕ ಶಕ್ತಿಯ ಮೇಲೆ ಆಧ್ಯಾತ್ಮಿಕ ಶಕ್ತಿ ಸಾಧಿಸಿದ ವಿಜಯದ ಸಂಕೇತವಾಗಿದೆ.

​ಸಿದ್ಧಲಿಂಗ ಮಹಾರಾಜರು ಲೋಕ ಸಂಚಾರ ಮಾಡುತ್ತಾ ಅಂತಿಮವಾಗಿ ಬಂದು ನೆಲೆಸಿದ್ದು ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ. ಅಂದು ಆ ಜಾಗವೊಂದು ಸ್ಮಶಾನವಾಗಿತ್ತು (ರುದ್ರಭೂಮಿ). ಗುರುವಿನ ಆದೇಶದಂತೆ ಆ ರುದ್ರಭೂಮಿಯನ್ನೇ ಆಯ್ಕೆ ಮಾಡಿಕೊಂಡ ಸಿದ್ದಲಿಂಗರು, ಅಲ್ಲಿ ‘ಕಮರಿ ಮಠ’ವನ್ನು ಸ್ಥಾಪಿಸಿದರು. ಓರ್ವ ಯೋಗಿಯ ಪಾದಸ್ಪರ್ಶದಿಂದ ಮರುಭೂಮಿಯೂ ನಂದನವನವಾಗುತ್ತದೆ. ಇಂದು ಲಚ್ಯಾಣದ ಆ ಸ್ಮಶಾನ ಭೂಮಿ ಜಗತ್ತಿನ ಅಸಂಖ್ಯಾತ ಭಕ್ತರಿಗೆ ದರ್ಶನ ನೀಡುವ ಪವಿತ್ರ ಕೈಲಾಸವಾಗಿ ಕಂಗೊಳಿಸುತ್ತಿದೆ. “ನಿನ್ನನ್ನೇ ನಂಬಿದ ಭಕ್ತರು ಉದ್ಧಾರವಾಗಲಿ, ಈ ಕಮರಿ ಮಠ ಯುಗಯುಗಾಂತರಗಳವರೆಗೆ ಶೋಭಾಯಮಾನವಾಗಿ ಬೆಳಗಲಿ” ಎಂಬ ಶಂಕರಲಿಂಗ ಮಹಾಶಿವಯೋಗಿಗಳ ಆಶೀರ್ವಾದ ಇಂದು ಅಕ್ಷರಶಃ ಸತ್ಯವಾಗಿದೆ.

​ಸಂತರು ತಮ್ಮ ತಪಸ್ಸಿನ ಫಲವನ್ನು ಎಂದಿಗೂ ತಮಗಾಗಿ ಇಟ್ಟುಕೊಳ್ಳುವುದಿಲ್ಲ. ಕಮರಿ ಮಠವನ್ನು ಅಭಿವೃದ್ಧಿಪಡಿಸಿದ ಸಿದ್ಧಲಿಂಗ ಮಹಾರಾಜರು, ಆ ಸಂಪೂರ್ಣ ಮಠವನ್ನು ತಮ್ಮ ಗುರುಪೀಠವಾದ ಬಂಥನಾಳ ಮಠಕ್ಕೆ ಅತ್ಯಂತ ವಿನಯದಿಂದ ಸಮರ್ಪಿಸಿದರು. ಅಧಿಕಾರ ಮತ್ತು ಆಸ್ತಿಗಾಗಿ ಕಿತ್ತಾಡುವ ಇಂದಿನ ಸಮಾಜಕ್ಕೆ, ಸರ್ವಸ್ವವನ್ನೂ ತ್ಯಜಿಸುವ ಈ ಪರಮ ವೈರಾಗ್ಯದ ನಡೆಯೇ ಅತ್ಯಂತ ದೊಡ್ಡ ಪಾಠವಾಗಿದೆ.

​ಲಚ್ಯಾಣ ಮಠ ಇಂದು ಕೇವಲ ಒಂದು ಕಟ್ಟಡವಲ್ಲ, ಅದೊಂದು ಜೀವಂತ ಅನುಭಾವ ಕೇಂದ್ರ. ನಿತ್ಯ ನೂರಾರು ಸಾಧು-ಸಂತರು ಸೇರುವ ತಪೋಭೂಮಿ. ಮುಗಳಖೋಡದ ಯಲ್ಲಾಲಿಂಗ ಮಹಾರಾಜರು, ಪುಣೆ ಮತ್ತು ಕೃಷ್ಣಾ ಮಠದ ಕ್ಷೀರಾಲಿಂಗ ಮಹಾರಾಜರು, ಆಹೇರಿಯ ಆತ್ಮಾನಂದ ಸ್ವಾಮಿಗಳು, ಮಧುರಖಂಡಿಯ ಸಿದ್ಧಲಿಂಗ ಮಹಾರಾಜರು, ಸಂಭಾವಿಯ ಹಣಮಂತ ಮಹಾರಾಜರು, ಹಿರೇರೂಗಿ ಹಾಗೂ ಬೊಳೆಗಾಂವ ಮಠದ ಬಸವಲಿಂಗ ಶರಣರು, ಗಿರಿಯಮ್ಮ ತಾಯಿಯಂತಹ ಅನೇಕ ಶ್ರೇಷ್ಠ ಚೇತನರು ಇಲ್ಲಿಯೇ ಉಪದೇಶ ಪಡೆದು, ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಈ ಪರಂಪರೆ ಇಂದಿಗೂ ನಿರಂತರವಾಗಿ ಹರಿಯುತ್ತಲೇ ಇದೆ.

​೧೯೨೭ರ ಭಾದ್ರಪದ ವದ್ಯ ಸಪ್ತಮಿಯ ದಿನ. ತಮ್ಮ ಭೌತಿಕ ಕರ್ತವ್ಯಗಳನ್ನು ಮುಗಿಸಿದ ಸಿದ್ಧಲಿಂಗ ಮಹಾರಾಜರು ಅತ್ಯಂತ ಪ್ರಶಾಂತವಾಗಿ ತಮ್ಮ ದೇಹವನ್ನು ಗುರುವಿನ ಪಾದಕ್ಕೆ ಸಮರ್ಪಿಸಿ ಲಿಂಗೈಕ್ಯರಾದರು. ಅವರು ದೇಹವನ್ನು ತ್ಯಜಿಸಿರಬಹುದು, ಆದರೆ ಅವರ ಅತೀಂದ್ರಿಯ ಶಕ್ತಿ, ಕರುಣೆ ಮತ್ತು ಆಶೀರ್ವಾದ ಇಂದಿಗೂ ಲಚ್ಯಾಣದ ಕಮರಿ ಮಠದಲ್ಲಿ ಪ್ರಕಂಪಿಸುತ್ತಿದೆ. ಮನುಷ್ಯ ತನ್ನ ಅಹಂಕಾರವನ್ನು ಬಿಟ್ಟು, ಅಂತರಂಗವನ್ನು ಶುದ್ಧಿ ಮಾಡಿಕೊಂಡಾಗ ಮಾತ್ರ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂಬ ಸತ್ಯವನ್ನು ಸಿದ್ದಲಿಂಗರು ಜಗತ್ತಿಗೆ ಸಾರಿದ್ದಾರೆ. ಅವರ ಪವಾಡಗಳ ಆಳದಲ್ಲಿರುವ ಈ ಶುದ್ಧ ವೈರಾಗ್ಯದ ತತ್ತ್ವವನ್ನು ಅರ್ಥಮಾಡಿಕೊಂಡವರೇ ನಿಜವಾದ ಪುಣ್ಯವಂತರು. ಲಚ್ಯಾಣದ ಮಣ್ಣಿಗೆ ಆ ತೇಜಸ್ಸನ್ನು ಇಂದಿಗೂ ಹಿಡಿದಿಟ್ಟುಕೊಳ್ಳುವ ಅದ್ಭುತ ಶಕ್ತಿಯಿದೆ. ಭಕ್ತಿಯಿಂದ ಅಲ್ಲಿಗೆ ಹೆಜ್ಜೆಯಿಡುವ ಪ್ರತಿಯೊಬ್ಬರಿಗೂ ಆ ಸಾಕ್ಷಾತ್ಕಾರದ ಸ್ಪರ್ಶವಾಗುವುದು ಖಂಡಿತ.

ಶಿವರಾಜ ಸೂ. ಸಣಮನಿ, ಮದಗುಣಕಿ

Leave A Reply

Your email address will not be published.