Shubhashaya News

ಗಾಣಗಾಪೂರದಲ್ಲಿ ಶ್ರಮದಾನ; ಸ್ವಚ್ಛತೆಗೆ ಕೈಜೋಡಿಸಿದ ಸ್ಥಳೀಯ ಶಾಲಾ ವಿದ್ಯಾರ್ಥಿಗಳ ವೃಂದ

ಕಲಬುರಗಿ: ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛ ಭಾರತ್ ಅಭಿಯಾನದಡಿ ಅಫಜಲಪೂರ ತಾಲೂಕಿನ ಸುಕ್ಷೇತ್ರ ದೇವಲಗಾಣಗಾಪುರದಲ್ಲಿ‌ ಶುಕ್ರವಾರ ಸತ್ಸಂಗ್ ಫೌಂಡೇಶನ್‌ನ ಸ್ವಯಂಸೇವಕರ ತಂಡವು ಸ್ಥಳೀಯ ದೇವಸ್ಥಾನದ ಸ್ವಚ್ಛತಾ ಸಿಬ್ಬಂದಿ ಜೊತೆಗೂಡಿ ನರಸಿಂಹ ತೀರ್ಥ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು.

ಸ್ವಚ್ಛತಾ ಕಾರ್ಯಕ್ಕೆ ಸ್ಥಳೀಯ
ಯತಿರಾಜ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಸಹ ಕೈಜೋಡಿಸಿದ್ದರಿಂದ ನರಸಿಂಹ ತೀರ್ಥ ಪ್ರದೇಶದಲ್ಲಿ ಸುಮಾರು 700–800 ಕೆ.ಜಿ. ಘನ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.

ಸತ್ಸಂಗ್ ಫೌಂಡೇಷನ್ ಹಾಗೂ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಆಡಳಿತ ಮಂಡಳಿ ಸಹಯೋಗದಲ್ಲಿ ನಡೆದ ಪರಿಸರ ಜಾಗೃತಿ ಮತ್ತು ಸ್ವಚ್ಛತಾ ಅಭಿಯಾನದ ಕಾರ್ಯಕ್ರಮವನ್ನು ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತೆ ರಿತಿಕಾ ವರ್ಮಾ ಅವರು ಉದ್ಘಾಟಿಸಿ ಮಾತನಾಡಿ, ಪ್ರದೇಶದ ಸ್ವಚ್ಛತೆ ಆ ನೆಲದ ಭವ್ಯತೆಯನ್ನು ಸಾರುತ್ತದೆ. ಹೀಗಾಗಿ ಇಂದಿನ ಮಕ್ಕಳು ಯುವಜನರು ಮತ್ತು ಸಮುದಾಯದ ಜನರಲ್ಲಿ ಪರಿಸರದ ಜವಾಬ್ದಾರಿ, ಸ್ವಚ್ಛತೆ ಹಾಗೂ ಸಮಾಜಸೇವೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದರು.

ಗಾಣಗಾಪುರ ಸಂಗಮ ಕ್ಷೇತ್ರದ ಪಾವಿತ್ರ್ಯತೆ ಹೆಚ್ಚಿಸಲು ನದಿ ಪಾತ್ರದಲ್ಲಿ ಕಡ್ಡಾಯ ಸ್ವಚ್ಛತಾ ಕ್ರಮಗಳನ್ನು ಅನುಸರಿಸಬೇಕು. ಸತ್ಸಂಗ್ ಫೌಂಡೇಶನ್ ಹಿಮಾಲಯನ್ ಗುರುಗಳು ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪೂಜ್ಯ ಶ್ರೀ ಎಂ. ಅವರು ತಮ್ಮ ಸತ್ಸಂಗಿಗಳ ಶಿಷ್ಯ ಬಳಗಕ್ಕೆ ಈ ರೀತಿಯ ಸಮಾಜಮುಖಿ ಕೆಲಸ ಮಾಡಲು ದೊಡ್ಡ ಪ್ರೇರಣೆಯಾಗಿದ್ದಾರೆ ಎಂದ ಅವರು, ಸತ್ಸಂಗ್ ಫೌಂಡೇಶನ್ ಸಮಾಜಮುಖಿ ಕಾರ್ಯ ಮಾದರಿಯಾಗಿದೆ ಎಂದು ಗುಣಗಾನ ಮಾಡಿದರು.

ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರೀಕರ ಹಾಗೂ ವಿದ್ಯಾರ್ಥಿಗಳ ಕರ್ತವ್ಯ. ಎಷ್ಟು ವಿದ್ಯಾರ್ಥಿಗಳ ಮನೆಯಲ್ಲಿ ಶೌಚಾಲಯಗಳಿವೆ? ಎಲ್ಲರೂ ಅದನ್ನು ಬಳಸುತ್ತಿದಿರಾ ಎಂದು ವಿದ್ಯಾರ್ಥಿಗಳನ್ನು ಕೇಳಿದ‌ ರಿತಿಕಾ ವರ್ಮ ಅವರು, ಮುಕ್ತ ಬಹಿರ್ದೆಸೆಗೆ ಹೋಗದೆ ಶೌಚಾಲಯವನ್ನೇ ಬಳಸಬೇಕು. ಗ್ರಾಮಗಳ ಪರಿಸರದಲ್ಲಿ ಶೌಚಾಲಯವಿದ್ದರೂ ಬಳಸದೆ ಇರುವುದು ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತದೆ. ಇಂದಿನ ದಿನಮಾನದಲ್ಲಿ ಉತ್ತಮ ಆರೋಗ್ಯ ಹೊಂದಲು ನೈರ್ಮಲ್ಯಕಗಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.

ಗಾಣಗಾಪುರ ದೇವಸ್ಥಾನದ ನೋಡಲ್ ಅಧಿಕಾರಿಯಾಗಿರುವ ಐ‌.ಎ.ಎಸ್. ಪ್ರೊಬೇಷನರ್ ಅಧಿಕಾರಿ ಶಿಖರ್ ಮೊಘಾ ಅವರು ಮಾತನಾಡಿ, ವಿದ್ಯಾರ್ಥಿಗಳ ಶ್ರಮದಾನದ ಸ್ವಚ್ಛತಾ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಅಲ್ಲದೆ, ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸುವುದು ಹಾಗೂ ಜೈವಿಕವಾಗಿ ವಿಘಟಿಸಬಹುದಾದ ಉತ್ಪನ್ನಗಳನ್ನು ಬಳಸುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು.

ಸ್ವಚತಾ ಶ್ರಮದಾನ ಕಾರ್ಯದಲ್ಲಿ ಸತ್ಸಂಗ್ ಫೌಂಡೇಶನ್‌ನ ಸ್ವಯಂಸೇವಕರು , ಗಾಣಗಾಪುರ ಪಿ.ಡಿ.ಓ ಅನುಸೂಯಾ ಸೇರಿದಂತೆ ದೇವಸ್ಥಾನದ ಸ್ವಚ್ಛತಾ ಸಿಬ್ಬಂದಿ ಹಾಗೂ ಯತಿರಾಜ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Leave A Reply

Your email address will not be published.