ಕಲಬುರಗಿ : ನಮ್ಮ ಕಲಬುರಗಿ ಸಾರಿಗೆ ಆಪ್ ಸೇವೆ ಸ್ಥಗಿತವಾಗಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಹಾಗೂ ಕಾರ್ಮಿಕರಿಗೆ ಬಸ್ ಬರುವ ಸಮಯದ ಕುರಿತು ಸರಿಯಾದ ಮಾಹಿತಿ ದೊರೆಯದೆ ಪರದಾಡುವಂತಾಗಿದೆ. ಹೀಗಾಗಿ ಆಪ್ ಸೇವೆಯನ್ನು ಮರು ಪ್ರಾರಂಭಿಸಬೇಕೆಂದು ಕರ್ನಾಟಕ ಯುವ ಮುನ್ನಡೆ ತಂಡದ ಯುವಜನರು ಟೀಶರ್ಟ್ ಮೇಲೆ ಸಾರ್ವಜನಿಕರಿಂದ ಸಹಿ ಮಾಡಿಸಿಕೊಳ್ಳವ ಮೂಲಕ ವಿಭಿನ್ನವಾಗಿ ಅಭಿಯಾನ ಮಾಡಿದರು.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಿಳಿ ಟೀಶರ್ಟ್ ಮೇಲೆ ಹಾಗೂ ಬ್ಯಾನರ್ ಮೇಲೆ ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಿಕೊಳ್ಳುವ ಮೂಲಕ ಕರ್ನಾಟಕ ಯುವ ಮುನ್ನಡೆ ತಂಡವು ಗಮನ ಸೆಳೆಯಿತು.
ನಮ್ಮ ಕಲಬುರಗಿ ಸಾರಿಗೆ ಆಪ್ ಸೇವೆ ಸೇರಿದಂತೆ ನಗರದ ಸಿಟಿ ಬಸ್‌ಗಳು ಸಮಯಕ್ಕೆ ಸರಿಯಾಗಿ ವೇಳಾಪಟ್ಟಿಯ೦ತೆ ಸ೦ಚರಿಸುತ್ತಿಲ್ಲ. ಇದರಿ೦ದ ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಮತ್ತು ಹಿರಿಯ ನಾಗರಿಕರಿಗೆ ಬಸ್‌ಗಳು ಸ೦ಚರಿಸುವ ಕನಿಷ್ಟ ಮಾಹಿತಿಯು ಸಿಗುತ್ತಿಲ್ಲ.
ಬಸ್‌ಗಳ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹಾಜರಾಗಲು ಕಷ್ಟವಾಗುತ್ತಿದೆ, ಆದ್ದರಿ೦ದ ಬಸ್‌ಗಳು ಸರಿಯಾದ ಸಮಯಕ್ಕೆ ಸ೦ಚರಿಸುವಂತಾಗಬೇಕೆಂದು ಮತ್ತು ನಮ್ಮ ಕಲಬುರಗಿ ಸಾರಿಗೆ ಆಪ್ ಸೇವೆ ಮರು ಬಳಕೆಗೆ ತರಬೇಕೆಂದು ಕಲಬುರಗಿ ವಿಭಾಗದ ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ನೀಡಿದರು.