ಕಲಬುರಗಿ: ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಗೆ ಸರ್ಕಾರ ಘೋಷಿಸಿರುವ ಪರಿಹಾರ ಮೊತ್ತ ಅವೈಜ್ಞಾನಿಕವಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಸಮರ್ಪಕ ನೆರವು ನೀಡಬೇಕು. ರೈತರ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡಬೇಕು, ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನುಬದ್ಧ ಖಾತರಿ ನೀಡಬೇಕು ಹಾಗೂ ರೈತರ ಆತ್ಮಹತ್ಯೆ ತಡೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಆಗ್ರಹಿಸಿದೆ.
ಈ ಕುರಿತು ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ, ಒತ್ತಾಯ ಮಾಡಿದರು.
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯ ಹಲವು ತಾಲೂಕುಗಳಲ್ಲಿ ರೈತರು ಬಿತ್ತನೆ ಮಾಡಲು ಸಾಧ್ಯವಾಗದ ಸ್ಥಿತಿ ಎದುರಿಸುತ್ತಿದ್ದಾರೆ. ಕೆಲವೆಡೆ ಬಿತ್ತನೆ ಮಾಡಿದ ಬೆಳೆಗಳು ತೀವ್ರ ಬಿಸಿಲಿನಿಂದ ಒಣಗಿ ಹೋಗಿವೆ. ಬೋರ್‌ವೆಲ್‌ಗಳು ಹಾಗೂ ಬಾವಿಗಳು ಬತ್ತಿದ್ದು, ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿವೆ. ಕಬ್ಬು ಕಟಾವು ಕೂಡ ವಿಳಂಬವಾಗುವ ಆತಂಕ ರೈತರನ್ನು ಕಾಡುತ್ತಿದೆ ಮುಖಂಡರು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ರೈತರಿಗೆ ಕೇವಲ ₹2,500 ಪರಿಹಾರ ಘೋಷಿಸಿರುವುದು ಕೃಷಿ ವೆಚ್ಚಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದ್ದು, ರೈತರಿಗೆ ಸಮರ್ಪಕ ಪರಿಹಾರ ನೀಡದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಯಲ್ಲಿ 22 ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಈ ಪೈಕಿ ಆರು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿಲ್ಲ ಎಂದು ಅವರು ಆರೋಪಿಸಿದ್ದು, ರೈತರ ಆತ್ಮಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸಂತ್ರಸ್ತ ಕುಟುಂಬಗಳಿಗೆ ನಿಯಮಾನುಸಾರ ನೆರವು ಒದಗಿಸಬೇಕು ಎಂದು ಒತ್ತಾಯಿಸಿದರು.
ಬರ ಘೋಷಣೆಗಾಗಿ ಕಲಬುರಗಿ ಬಂದ್, ರಸ್ತೆ ತಡೆ ಹಾಗೂ ತಹಶೀಲ್ದಾರ್ ಕಚೇರಿಗಳ ಎದುರು ಪ್ರತಿಭಟನೆ ಸೇರಿದಂತೆ ನಿರಂತರ ಹೋರಾಟ ನಡೆಸಿದ ಬಳಿಕ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಆದರೆ ಬರ ಘೋಷಣೆಗೆ ಮಾತ್ರ ಸೀಮಿತವಾಗದೆ, ರೈತರಿಗೆ ತಕ್ಷಣ ಪರಿಹಾರ ತಲುಪಿಸುವ ಕಾರ್ಯವಾಗಬೇಕು ಎಂದು ಆಗ್ರಹಿಸಿದರು.
ಮುಖಂಡ ಕರೆಪ್ಪ ಕರಗೊಂಡ ಮಾತನಾಡಿ, ಪ್ರತಿ ಎಕರೆಗೆ ಕನಿಷ್ಠ 5,000 ಬರ ಪರಿಹಾರ ನೀಡಬೇಕು. ಸಂಕಷ್ಟದಲ್ಲಿರುವ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡಬೇಕು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಅಗತ್ಯ ನೆರವು ಒದಗಿಸಬೇಕು. ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನುಬದ್ಧ ಖಾತರಿ ಕಲ್ಪಿಸಬೇಕು ಹಾಗೂ ರೈತರ ಆತ್ಮಹತ್ಯೆ ತಡೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತೊಗರಿ, ಕಬ್ಬು, ಈರುಳ್ಳಿ ಹಾಗೂ ಹತ್ತಿ ಬೆಳೆಗಳ ಬಿತ್ತನೆ ಮತ್ತು ನಾಟಿ ವೆಚ್ಚದ ವಿವರಗಳನ್ನು ನೀಡಿದ ರೈತ ಸಂಘದ ಮುಖಂಡರು, ಪ್ರಸಕ್ತ ಕೃಷಿ ವೆಚ್ಚಕ್ಕೆ ಹೋಲಿಸಿದರೆ ಸರ್ಕಾರ ಘೋಷಿಸಿರುವ ಪರಿಹಾರ ಮೊತ್ತ ಸಮರ್ಪಕವಾಗಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಉಮಾಪತಿ ಪಾಟೀಲ, ದಿಲೀಪ್ ನಾಗೂರೆ, ಭೀಮಶಾ ಬಡದಾಳ, ಶರಣಬಸಪ್ಪ ಪೂಜಾರಿ, ಶರಣಗೌಡ ಪಾಟೀಲ ಸೇರಿದಂತೆ ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.