ಚಿತ್ತಾಪುರ: ಪಟ್ಟಣದಿಂದ ಓರಿಯಂಟ್ ಸಿಮೆಂಟ್ ಕಂಪೆನಿಗೆ ಸಂಪರ್ಕಿಸುವ ರಿಂಗ್ ರಸ್ತೆ ಕಾಮಗಾರಿಗೆ ತಡೆಹಿಡಿದ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೀಪಕ್ ಹೊಸ್ಸುರಕರ್, ಪರವಾನಿಗೆ ಪಡೆದು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿದರು.
ಚಿತ್ತಾಪುರ: ಪಟ್ಟಣದ ಸಮೀಪ ಇಟಗಾ ಗ್ರಾಮದ ಹತ್ತಿರ ಇರುವ ಓರಿಯಂಟ್ ಸಿಮೆಂಟ್ ಕಂಪೆನಿಗೆ ಸಂಪರ್ಕಿಸುವ ರಿಂಗ್ ರಸ್ತೆ ನಿರ್ಮಾಣಕ್ಕೆ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೀಪಕ್ ಹೊಸ್ಸುರಕರ್ ಬ್ರೇಕ್ ಹಾಕಿ ನಿಯಮನುಸಾರವಾಗಿ ರಸ್ತೆ ನಿರ್ಮಾಣ ಮಾಡಿ ಎಂದು ಕಂಪೆನಿ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಪಟ್ಟಣದ ಲಾಡ್ಜಿಂಗ್ ಕ್ರಾಸ್‍ದಿಂದ ಓರಿಯಂಟ್ ಸಿಮೆಂಟ್ ಕಂಪೆನಿಗೆ ಹೋಗುವ ರಸ್ತೆ ತೀರ ಹದಗೆಟ್ಟಿದ್ದು ಸಂಚಾರಕ್ಕೆ ತೀವ್ರ ತೊಂದರೆ ಆಗಿತ್ತು. ಅಲ್ಲದೇ ಈ ಮಾರ್ಗದಿಂದ ಸಂಚರಿಸುವ ಮೊಗಲಾ, ಇಟಗಾ, ಸ್ಟೇಷನ್ ತಾಂಡಾ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಸಿಮೆಂಟ್ ಕಂಪೆನಿಗೆ ಹೋಗುವ ಬೃಹತ್ ಗಾತ್ರದ ಲಾರಿ, ಟ್ಯಾಂಕರ್ ಸಂಚರಿಸುತ್ತಿದ್ದರಿಂದ ಮೊದಲಿನ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಪ್ರಸ್ತುತ ಓರಿಯಂಟ್ ಕಂಪೆನಿಯವರು 1 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ನಗರ ಯೋಜನಾ ಪ್ರಾಧಿಕಾರದಿಂದ ಮತ್ತು ಪುರಸಭೆ ಗಮನಕ್ಕೆ ತರದೆ ಮತ್ತು ಯಾವುದೇ ಪರವಾನಿಗೆ ಪಡೆಯದೆ ಮತ್ತು ಗುಣಮಟ್ಟದ ಕಾಮಗಾರಿ ಮಾಡದೆ ತಮ್ಮ ಮನ ಬಂದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಓರಿಯಂಟ್ ಕಂಪೆನಿ ಸ್ಥಾಪನೆಯಾದಗಿನಿಂದ ಇಲ್ಲಿವರೆಗೆ ಕಂಪೆನಿ ವ್ಯಾಪ್ತಿಯ ಗ್ರಾಮಗಳಿಗಾಗಲಿ ಮತ್ತು ಪಟ್ಟಣದ ಅಭಿವೃದ್ಧಿಗಾಗಲಿ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಲ್ಲ. ಬರಿ ಸುಳ್ಳು ಅಶ್ವಾಸನೆ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಏನಾದರೂ ಅಭಿವೃದ್ಧಿ ಕುರಿತು ವಿಚಾರಿಸರೆ ಪಟ್ಟಣದ ಮತ್ತು ಗ್ರಾಮಗಳ ಮುಖಂಡರ ನಡುವೆಯೇ ಕುತಂತ್ರದಿಂದ ಮತ್ತು ಒಬ್ಬರನ್ನು ಎತ್ತಿಕಟ್ಟುವ ಮೂಲಕ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಕೂಡಲೇ ಪ್ರಸ್ತುತ ನಡೆಯುತ್ತಿರುವ ರಸ್ತೆ ಕಾಮಗಾರಿ ಕೂಡಲೇ ನಿಲ್ಲಿಸಿ, ನಿಯಮನುಸಾರ ಪರವಾನಿಗೆ ಪಡೆದು ಗುಣಮಟ್ಟದಿಂದ ಕಾಮಗಾರಿ ಮುಂದುವರೆಸಿ ಎಂದು ಒತ್ತಾಯಿಸಿದ ಅವರು, ಈ ಹಿಂದೆ ಕಳಪೆ ಮಟ್ಟದ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಪುನ: ರಸ್ತೆ ಕಾಮಗಾರಿ ಗುತ್ತಿಗೆ ನೀಡಿರುವುದು ಭ್ರಷ್ಟಚಾರ ಮತ್ತು ಕಳಪೆ ಕಾಮಗಾರಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತಿದೆ ಎಂದು ದೂರಿದರು.
ಕಂಪೆನಿಯಿಂದ ಪಟ್ಟಣದ ರಸ್ತೆಗಳು ಹದಗೆಟ್ಟಿವೆ ಹೀಗಾಗಿ ಕಳಪೆ ಮಟ್ಟದ ರಸ್ತೆಗೆ ಆಸ್ಪದ ನೀಡದೇ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ದಶರಥ ದೊಡ್ಡಮನಿ, ಗುತ್ತಿಗೆದಾರರಾದ ಮುಕ್ತಾರ ಪಟೇಲ್, ಮಲ್ಲಿಕಾರ್ಜುನ ಸಜ್ಜನಶೆಟ್ಟಿ, ಕಂಪೆನಿ ಇಂಜಿನಿಯರ್ ಬಸವರಾಜ ಹಿರೇಮಠ ಇದ್ದರು.
ಓರಿಯಂಟ್ ಸಿಮೆಂಟ್ ಕಂಪೆನಿಯ ಅಧಿಕಾರಿಗಳು ಕಂಪೆನಿಯ ವ್ಯಾಪ್ತಿಯ ಪಟ್ಟಣ ಸೇರಿದಂತೆ ಗ್ರಾಮಗಳ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಮುಖಂಡರ ನಡುವೆಯೇ ಒಂದಿಲ್ಲೊಂದು ಮಾತು ಹೇಳಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಡಿವೈಡೆಂಡ್ ರೂಲ್ ಮಾಡುವುದನ್ನು ಬಿಟ್ಟು ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿ ಮಾಡುವ ಕಡೆ ಗಮನ ಹರಿಸಿ.
-ದೀಪಕ್ ಹೊಸ್ಸುರಕರ್ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ.