ಕಾಳಗಿ : ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸುಕ್ಷೇತ್ರ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ, ದೇವಸ್ಥಾನ ಸಿಬ್ಬಂದಿಗಳು ಹುಂಡಿ ಹಣ ಎಣಿಕೆ ಮಾಡಿದ್ದು ₹ 41,82,560 ರೂ. ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಮಾರ್ಚ್ 24ರಿಂದ ಇಲ್ಲಿಯವರೆಗೆ ಸುಮಾರು ಆರು ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡಲಾಗಿದೆ.
₹ 41,82,560ರೂ. ನಗದು, 40ಗ್ರಾಂ ಬಂಗಾರ, 560ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಹುಂಡಿಯಲ್ಲಿ ಸಂಗ್ರಹವಾದ ನಗದು ಹಣವನ್ನು ರೇವಗ್ಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್’ನ ದೇವಸ್ಥಾನ ಖಾತೆಗೆ ಜಮೆ ಮಾಡಲಾಗಿದೆ. ಬಂಗಾರ, ಬೆಳ್ಳಿಯನ್ನು ದೇವಸ್ಥಾನ ಟ್ರೆಜರಿಯಲ್ಲಿ ಇಡಲಾಗಿದೆ ಎಂದು ಸೇಡಂ ಸಹಾಯಕ ಆಯುಕ್ತ ಕಚೇರಿ ತಹಶಿಲ್ದಾರ ನಾಗನಾಥ ತರಗೆ ತಿಳಿಸಿದ್ದಾರೆ.
ದೇವಸ್ಥಾನ ಆಡಳಿತ ಅಧಿಕಾರಿ ಹಾಗೂ ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಶಿಲ್ದಾರ ನಾಗನಾಥ ತರಗೆ, ದ್ವಿತೀಯ ದರ್ಜೆ ಸಹಾಯಕ ಹೇಮಂತ, ದೇವಸ್ಥಾನ ಕಾರ್ಯದರ್ಶಿ ಸದಾಶಿವ ವಗ್ಗೆ, ಮುಖಂಡ ವೀರಣ್ಣ ಗಂಗಾಣಿ ಸೇರಿದಂತೆ ಕಂದಾಯ ಇಲಾಖೆ ಹಾಗೂ ದೇವಸ್ಥಾನ ಸಿಬ್ಬಂದಿಗಳು ಇದ್ದರು.