ಕಲಬುರಗಿ: ಪುಸ್ತಕಗಳು ವ್ಯಕ್ತಿಗೆ ಸಂಸ್ಕಾರ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದರ ಜೊತೆಗೆ ಜೀವನದಲ್ಲಿ ಸಾಧನೆಯತ್ತ ಸಾಗಲು ಮಾರ್ಗದರ್ಶನ ನೀಡುತ್ತವೆ. ಪುಸ್ತಕಗಳು ಜೀವಂತ ಆದರ್ಶಗಳ ಪಾಠ ಕಲಿಸುವ ಮೂಲಕ ಬದುಕಿಗೆ ದಾರಿದೀಪವಾಗುತ್ತವೆ ಎಂದು ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಹೇಳಿದರು.
ನಗರದ ರಾಮಮಂದಿರದ ಸಮೀಪದ ವಿವೇಕಾನಂದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆ.24ರಂದು ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರ ಹಾಗೂ ಸಾಹಿತಿ ದಿ. ಮಹಾದೇವಪ್ಪ ಕಡೇಚೂರ್ ಅವರ ‘ಅಯ್ಯನ ಕಥೆಗಳು’ ಪುಸ್ತಕ ವಿತರಣಾ ಅಭಿಯಾನದ ಮೂರನೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಹಾದೇವಪ್ಪ ಕಡೇಚೂರ್ ಅವರು ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ್ದಲ್ಲದೆ, ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಚಿಂತನೆಗಳು ಹಾಗೂ ಬದುಕಿನ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಟ್ರಸ್ಟ್‌ನ ಈ ಅಭಿಯಾನ ಶ್ಲಾಘನೀಯವಾಗಿದೆ ಎಂದರು.
ಹಿರಿಯ ಪತ್ರಕರ್ತ ಬಾಬುರಾವ್ ಯಡ್ರಾಮಿ ಮಾತನಾಡಿ, ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಪುಸ್ತಕ ವಿತರಣಾ ಅಭಿಯಾನವನ್ನು ಕಲ್ಯಾಣ ಕರ್ನಾಟಕದಾದ್ಯಂತ ವಿಸ್ತರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಬೇಕು ಎಂದರು.
ಮಹಾದೇವಪ್ಪ ಕಡೇಚೂರ್ ಅವರ ಬದುಕು, ಬರಹ ಹಾಗೂ ಆದರ್ಶಗಳು ಯುವಜನರಿಗೆ ಸ್ಫೂರ್ತಿದಾಯಕವಾಗಿವೆ. ಸ್ವಾತಂತ್ರ್ಯ ಹೋರಾಟಗಾರರು, ತಂದೆ-ತಾಯಿ ಹಾಗೂ ಗುರುಗಳನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆದರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಮಿತಿ ಹಾಕಿಕೊಂಡು ಅಧ್ಯಯನಶೀಲರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾನಿಕೇತನ ಸಂಸ್ಥೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಮಾತನಾಡಿದರು.
ಟ್ರಸ್ಟ್ ಸದಸ್ಯ ಮಹೇಶ್ ಕಡೇಚೂರ್ ಅವರು ಅತಿಥಿಗಳನ್ನು ಶಾಲು, ಕೃತಿ ಹಾಗೂ ಪುಷ್ಪ ನೀಡಿ ಗೌರವಿಸಿದರು. ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ತರ್ಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮೂರನೇ ಪುಸ್ತಕ ವಿತರಣಾ ಅಭಿಯಾನವೂ ಯಶಸ್ವಿಯಾಗಿ ನಡೆದಿದ್ದು, ಪ್ರತಿ ತಿಂಗಳ 24ರಂದು ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ವಿತರಿಸುವ ಯೋಜನೆ ಮುಂದುವರಿಯಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿನಿ ಅನನ್ಯ ಪ್ರಾರ್ಥನಾ ಗೀತೆ ಹಾಡಿದರು. ವಿದ್ಯಾರ್ಥಿನಿಯರಾದ ಸಾನ್ವಿ ಕುಲಕರ್ಣಿ, ಕಾವ್ಯ ಬಸಮೆ ಹಾಗೂ ಅನುಷಾ ಆನಂದ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರತ್ನಾ ಅಳ್ಳದ್ ವಂದಿಸಿದರು. ನಂತರ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.