Shubhashaya News

ಖಾಲಿ ಕೊಡಗಳೊಂದಿಗೆ ನಿವಾಸಿಗಳ ಪ್ರತಿಭಟನೆ

ಕಲಬುರಗಿ: ನಗರದ ವಾರ್ಡ್ ನಂ. ೫೨ರ ಅಕ್ಕಮಹಾದೇವಿ ಕಾಲೋನಿ, ದುರ್ಗಾಶಕ್ತಿ ಕಾಲೋನಿ, ವೀರಭದ್ರೇಶ್ವರ ಕಾಲೋನಿ, ಜಯತೀರ್ಥ ನಗರ, ನವಲದೆ ಲೇಔಟ್, ಶ್ರೀದತ್ತ ನಗರ ಹಾಗೂ ದೇಶಪಾಂಡೆ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದನ್ನು ಖಂಡಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಸಂತೋಷ್ ಕಾಲೋನಿಯ ಹನುಮಾನ್ ದೇವಸ್ಥಾನ ಎದುರು ನಿವಾಸಿಗಳು ಶಾಸಕ ಅಲ್ಲಮಪ್ರಭು ಪಾಟೀಲ ಅವರ ಭಾವಚಿತ್ರ ಹಿಡಿದು, ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಪ್ರದೇಶಗಳಲ್ಲಿ ಎಲ್ & ಟಿ ಸಂಸ್ಥೆಯಿoದ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದ್ದರೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿದರು.

ಈ ಕುರಿತು ಇತ್ತೀಚೆಗೆ ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಪರಿಹಾರಕ್ಕೆ ಸೂಕ್ತ ಗಮನಹರಿಸಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು. ನೀರಿನ ಸಮಸ್ಯೆಯ ಜೊತೆಗೆ ವಾರ್ಡ್ನ ಹಲವು ಕಡೆ ರಸ್ತೆಗಳು ಹದಗೆಟ್ಟು ತಗ್ಗು-ಗುಂಡಿಗಳಿoದ ಕೂಡಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸಲು ತೊಂದರೆಯಾಗುತ್ತಿದೆ ಎಂದು ದೂರಿದರು.
ಸಮಸ್ಯೆ ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕಿ ಶೋಭಾ ಗುರುರಾಜ ದೇಸಾಯಿ, ಎಚ್.ಎ. ರೆಡ್ಡಿ, ಶ್ರೀನಿವಾಸ ದೇಸಾಯಿ, ಸಂಜೀವ ರೆಡ್ಡಿ, ರವೀಂದ್ರ ಕುಲಕರ್ಣಿ, ಚಂದ್ರಕಾoತ ಕುಲಕರ್ಣಿ, ರಾಜು ವಾಡೇಕರ, ಅರವಿಂದ ಹುಣಸಗಿ, ಜಯಕುಮಾರ ಮೂಲಿಮನಿ, ಕೇಶವ ಕಾಬಾ, ಜಗದೀಶ ಹುನಗುಂದ, ವಿಶ್ವನಾಥ ಸಾಲಿಮಠ, ರಾಜು ಪಾಟೀಲ, ಶೋಭಾ ಪಾಟೀಲ, ಜ್ಯೋತಿ ಪಾಟೀಲ, ಅಂಬಿಕಾ ಪಾಟೀಲ, ಶಾರದಾ ಚವ್ಹಾಣ, ನಿಂಗಪ್ಪ ಮಾಸ್ಟರ್, ದಶರಥ ಠಾಕೂರ, ಪ್ರಭು ಪಸಾರೆ, ಗುರುರಾಜ ದೇಶಪಾಂಡೆ, ಸಿದ್ರಾಮಪ್ಪ ಮಹಾಂಗಾವ, ನಿಂಗಪ್ಪ ಕುಂಬಿ, ಮಹಾದೇವಪ್ಪ ಕೊರಳ್ಳಿ, ರವೀಂದ್ರ ಜೋಶಿ, ಶ್ರೀಕಾಂತ ಹೊಸಮನಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave A Reply

Your email address will not be published.