Shubhashaya News

ವಿದ್ಯಾರ್ಥಿಗಳೇ ನಾಡಿನ ಭವಿಷ್ಯದ ನಿರ್ಮಾತೃಗಳು: ಎ. ಕೆ. ರಾಮೇಶ್ವರ

ಸೇಡಂ: ವಿದ್ಯಾರ್ಥಿಗಳು ಜ್ಞಾನ, ಸಾಹಿತ್ಯ ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ನಾಡಿನ ದೊಡ್ಡ ಸಂಪತ್ತುಗಳಾಗಿ ಭವಿಷ್ಯದ ರಾಷ್ಟ್ರ ನಿರ್ಮಾತೃಗಳಾಗಬೇಕು ಮತ್ತು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂದು ಮಕ್ಕಳ ಸಾಹಿತ್ಯಲೋಕದ ಹಿರಿಯ ಕವಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಾಹಿತಿ ಎ.ಕೆ.ರಾಮೇಶ್ವರ ಕರೆ ನೀಡಿದರು.

ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಶ್ರೀಮತಿ ನಥಿಬಾಯಿ ಸೀತಾರಾಮ ಜೇಠಮಲ್ ತಾಪಾಡಿಯಾ ಮಾತೃಛಾಯಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ್ಞಾನ ದಾಸೋಹವೇ ಶ್ರೇಷ್ಠ ದಾಸೋಹ ಎಂದು ಪ್ರತಿಪಾದಿಸಿದರು.
ಪಡೆದ ಜ್ಞಾನವನ್ನು ತಮ್ಮ ವೈಯಕ್ತಿಕ ಬದುಕಿನ ಉನ್ನತಿಗೆ ಮಾತ್ರ ಸೀಮಿತಗೊಳಿಸದೆ, ಸಮಾಜದ ಒಳಿತಿಗಾಗಿ ಹಂಚಿಕೊಳ್ಳುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದ ಅವರು, ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಅದು ವ್ಯಕ್ತಿತ್ವ ನಿರ್ಮಾಣದ ಹಾಗೂ ಸಮಾಜವನ್ನು ಪರಿವರ್ತಿಸುವ ಶಕ್ತಿಯಾಗಿದೆ ಎಂದು ತಿಳಿಸಿದರು.
ರಂಗಭೂಮಿ ಕಲಾವಿದ, ಹಿರಿಯ ಸಾಹಿತಿ ಹಾಗೂ ಕಲಬುರಗಿ ರಂಗಾಯಣದ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ ಅವರು ಮಾತನಾಡಿ, ಅಧ್ಯಯನವು ಪ್ರದರ್ಶನಕ್ಕಲ್ಲದೇ ಜ್ಞಾನ ಸಂಪಾದನೆ ಮತ್ತು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯ ಡಾ. ಸದಾಶಿವ ಮಹಾ ಸ್ವಾಮಿಗಳು ವಹಿಸಿದ್ದರು.
ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಚನ್ನಬಸಪ್ಪ ಗವಿ ಹಾಗೂ ಪ್ರಧಾನ ಗುರುಗಳಾದ ಮನಸೂರ ಅವಂಟಿ, ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕರಾದ ರಾಜಕುಮಾರ ಚನ್ನಿರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಬಾಕ್ಸ
ಪಠ್ಯದ ಕವಿಯಿಂದ ಪುಸ್ತಕ ಗಿಫ್ಟ್
ಪ್ರಾಥಮಿಕ ಶಾಲೆಯ ಪಠ್ಯಪುಸ್ತಕದ ಕನ್ನಡದ ವಿಷಯದಲ್ಲಿ ವಿವಿಧ ತರಗತಿ ಹಾಗೂ ಆಂಗ್ಲ ಮಾಧ್ಯಮ ಐದನೇ ತರಗತಿಯಲ್ಲಿ ಮಕ್ಕಳ ಪದ್ಯ ಬರೆದ ಕವಿ ಎ.ಕೆ.ರಾಮೇಶ್ವರ ಅವರು ಸ್ವತಃ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಗಿಫ್ಟ್ ನೀಡಿದರು.
ತಾವು ಓದಿದ ಪಠ್ಯದ ಕವಿಗಳಾದ ಎ.ಕೆ.ರಾಮೇಶ್ವರ ಅವರನ್ನು ಕಣ್ತುಂಬಾ ನೋಡಿ, ಅವರೊಂದಿಗೆ ಕೈಕುಲುಕಿದ ವಿದ್ಯಾರ್ಥಿಗಳು ಖುಷಿಪಟ್ಟರು. ಕವಿ ಎ.ಕೆ.ರಾಮೇಶ್ವರ ಅವರು ಬರೆದ ‘ಕಲಬುರಗಿಯ ಶ್ರೀ ಶರಣಬಸವೇಶ್ವರರು’ ಎಂಬ ಪುಸ್ತಕವನ್ನು ಸುಮಾರು ೧೦೦ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು.

Leave A Reply

Your email address will not be published.