ಆಳಂದ: ಥ್ರೋಬಾಲ್ನಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಸಾವಳೇಶ್ವರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಂಗಣದಲ್ಲಿ ಅಧಿಕಾರಿಗಳು ಹಾಗೂ ಶಿಕ್ಷಕರೊಂದಿಗೆ ಟ್ರೋಫಿಯೊಂದಿಗೆ ಸಂಭ್ರಮಿಸಿದರು.
ಆಳಂದ: ತಾಲೂಕಿನ ಸಾವಳೇಶ್ವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದ ಥ್ರೋಬಾಲ್ ಪಂದ್ಯಾಟದಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಶಾಲೆಯ ದೈಹಿಕ ಶಿಕ್ಷಣದ ಶಿಕ್ಷಕ ಆಗಿರುವ ತಾಲೂಕು ದೈಹಿಕ ಶಿಕ್ಷಣದ ಶಿಕ್ಷಕರ ಸಂಘದ ಅಧ್ಯಕ್ಷ ಮಹಾದೇವ ಗುಣಕಿ ಅವರು ತಿಳಿಸಿದ್ದಾರೆ.
ಶಾಲೆಯ ವಿದ್ಯಾರ್ಥಿಗಳು ಸತತ ಮೂರನೇ ಬಾರಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದು, ಈ ಹಿಂದೆ ಎರಡು ಬಾರಿ ವಿಭಾಗ ಮಟ್ಟದ ಸ್ಪರ್ಧೆಗೂ ಆಯ್ಕೆಯಾಗಿರುವುದು ಶಾಲೆಯ ಕ್ರೀಡಾ ಸಾಧನೆಗೆ ಮತ್ತಷ್ಟು ಮೆರುಗು ತಂದಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಮುಖ್ಯಗುರು ದಯಾನಂದ ಮೈಂದರಗಿ, ದೈಹಿಕ ಶಿಕ್ಷಣ ಶಿಕ್ಷಕ ಮಹಾದೇವ ಗುಣಕಿ ಸೇರಿದಂತೆ ಶಿಕ್ಷಕ ವೃಂದ ಹಾಗೂ ಪಾಲಕ-ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ತರಬೇತಿ ಹಾಗೂ ಪ್ರೋತ್ಸಾಹ ನೀಡುತ್ತಿರುವ ಶಿಕ್ಷಕರ ಪ್ರಯತ್ನಕ್ಕೆ ಪಾಲಕ-ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿಯೂ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಕ್ಕಳ ಸಾಧನೆಗೆ ಕ್ರೀಡಾಂಗಣದಲ್ಲಿ ಶಾಸಕ ಬಿ.ಆರ್. ಪಾಟೀಲ, ಶಿಕ್ಷಣಾಧಿಕಾರಿ ಗೋವರ್ಧನ, ದೈಹಿಕ ಶಿಕ್ಷಣದ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ಸಮನ್ವಯಾಧಿಕಾರಿ ಅಣ್ಣಪ್ಪ ಹಾದಿಮನಿ, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಸಂಘದ ಅಧ್ಯಕ್ಷ ದತ್ತಾ ಬಡಿಗೇರ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ್, ಶಿಕ್ಷಕ ಶರಣಬಸಪ್ಪ ವಡಗಾಂವ,
ಹಾಗೂ ಶಾಲೆಯ ಶಿಕ್ಷಕರಾದ ರಾಜಶೇಖರ, ಬಸಮ್ಮ, ಶಿವಲೀಲಾ, ಜಯಶ್ರೀ, ಶ್ರೀಕಾಂತ, ಶರಣು, ಪರಮೇಶ್ವರ ಹಾಗೂ ಲಕ್ಷ್ಮಣ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.