ಆಳಂದ: ಜಿಡಗಾ ಮಠದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ೯೮ನೇ ಜನ್ಮೋತ್ಸವದ ಅಂಗವಾಗಿ ನೆರವೇರಿದ ನೂತನ ರಥೋತ್ಸವ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಸಮ್ಮುಖದಲ್ಲಿ ಭಕ್ತಾಧಿಗಳು ರಥವನ್ನೆಳೆದರು.
ಆಳಂದ: ಜಿಡಗಾ ನವಕಲ್ಯಾಣ ಮಠದ ಲಿಂ. ಶಿವಯೋಗಿ ಸಿದ್ಧರಾಮೇಶ್ವರ ಅವರ ೯೮ನೇ ಜನ್ಮೋತ್ಸವದ ಅಂಗವಾಗಿ ನೂತನ ರಥೋತ್ಸವವು ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಭಕ್ತಿಭಾವದ ಸಂಭ್ರಮದೊAದಿಗೆ ನೆರವೇರಿತು.
ಭಕ್ತರ ಬಹುದಿನಗಳ ಅಪೇಕ್ಷೆಯಂತೆ ಶ್ರೀಮಠದಲ್ಲಿ ನೂತನ ರಥ ನಿರ್ಮಾಣಗೊಂಡಿದ್ದು, ರಥದಾನಿ ಹಾಗೂ ಶ್ರೀಮಠದ ಆತ್ಮೀಯ ಭಕ್ತ ಮುರಲೀಧರ ಎಕಲಾರಕರ್ ಅವರು ರಥವನ್ನು ಸಮರ್ಪಿಸಿದ್ದಾರೆ. ಈ ಮೂಲಕ ವರ್ಷದಲ್ಲಿ ೩೬೫ ದಿನವೂ ಭಕ್ತರು ತಮ್ಮ ಸಂಕಲ್ಪದAತೆ ರಥ ಎಳೆದು ಶಿವಯೋಗಿ ಸಿದ್ಧರಾಮೇಶ್ವರರಿಗೆ ಭಕ್ತಿ ಸಮರ್ಪಿಸುವ ಹೊಸ ಪರಂಪರೆಗೆ ಚಾಲನೆ ದೊರೆತಿದೆ.
ನೂತನ ರಥೋತ್ಸವಕ್ಕೆ ಶ್ರೀಗಳು ಚಾಲನೆ ನೀಡುತ್ತಿದ್ದಂತೆ ಭಕ್ತರು ಜಯಘೋಷ ಮೊಳಗಿಸಿದರು. ರಥ ಸಾಗುವ ಮಾರ್ಗದುದ್ದಕ್ಕೂ ಭಕ್ತರು ಪುಷ್ಪವೃಷ್ಟಿ ಮಾಡುವ ಮೂಲಕ ಭಕ್ತಿಯ ನಮನ ಸಲ್ಲಿಸಿದರು. ಎನ್‌ಸಿಸಿ ಪಥಸಂಚಲನ, ಜಾಂಗಟೆ, ಡ್ರಂ ವಾದ್ಯಗಳ ನಿನಾದ ಹಾಗೂ ಕವಾಯಿ ಪಥಸಂಚಲನ ರಥೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದವು. ಸಂಜೆ ಆಕಾಶದಲ್ಲಿ ರಂಗುರAಗಿನ ಪಟಾಕಿಗಳು ಚಿಮ್ಮಿ ಸಂಭ್ರಮ ನೋಡುಗರ ಗಮನ ಸಳೆಯಿತು.
ಶ್ರೀ ಸಿದ್ಧರಾಮೇಶ್ವರ ಶ್ರೀಗಳ ಸುವರ್ಣ ತೊಟ್ಟಿಲೋತ್ಸವದಲ್ಲಿ ಸುವರ್ಣ ಮೂರ್ತಿಯನ್ನಿಟ್ಟು ತಾಯಂದಿರು ಜೋಗುಳ ಹಾಡಿ ಪುಷ್ಪವೃಷ್ಟಿ ನೆರವೇರಿಸಿದರು. ಭಕ್ತಾದಿಗಳು ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ ತುಲಾಭಾರ ಸೇವೆ ಸಲ್ಲಿಸಿದರು. ಮುತ್ತೆöÊದೆಯರಿಗೆ ಉಡಿ ತುಂಬುವ ಮೂಲಕ ಸಾಂಪ್ರದಾಯಿಕ ಆಚರಣೆ ನೆರವೇರಿತು.
ಆಶೀರ್ವಚನ ನೀಡಿದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು, ಶಿವಯೋಗಿ ಸಿದ್ಧರಾಮೇಶ್ವರರ ಜನ್ಮಕ್ಕೆ ೯೯ ವರ್ಷಗಳು ಪೂರ್ಣಗೊಂಡಿದ್ದು, ಮುಂದಿನ ವರ್ಷ ಶತಮಾನೋತ್ಸವ ಆಚರಣೆಗೆ ಸಿದ್ಧತೆ ನಡೆಯಲಿದೆ. ಗುರುಗಳ ಜಯಂತಿ ಉತ್ಸವದ ಸವಿನೆನಪಿಗಾಗಿ ಶ್ರೀಮಠದ ಆವರಣದಲ್ಲಿ ಭವ್ಯ ರಥ ನಿರ್ಮಿಸಬೇಕೆಂಬ ಸಂಕಲ್ಪ ಮಾಡಲಾಗಿತ್ತು. ಆ ಸಂಕಲ್ಪವನ್ನು ಶ್ರೀಮಠದ ಆತ್ಮೀಯ ಶಿಷ್ಯ ಮುರಲೀಧರ ಎಕಲಾರಕರ್ ಅವರು ಭಕ್ತಿ-ಶ್ರದ್ಧೆಯಿಂದ ನೆರವೇರಿಸಿ ರಥವನ್ನು ಸಮರ್ಪಿಸಿದ್ದಾರೆ ಎಂದು ಹೇಳಿದರು.
ಜಿಡಗಾ ಮಠವು ಈ ಭೂಮಿಯ ಮೇಲೆ ಇರುವವರೆಗೂ, ಸೂರ್ಯ-ಚಂದ್ರರು ಬೆಳಗುವವರೆಗೂ ಈ ಸೇವೆ ನಿರಂತರವಾಗಿರಬೇಕು ಎಂಬ ಭಾವನೆಯಿಂದ ರಥವನ್ನು ಸಮರ್ಪಿಸಲಾಗಿದೆ. ಇನ್ನು ಮುಂದೆ ವರ್ಷದ ೩೬೫ ದಿನವೂ ಭಕ್ತರು ತಮ್ಮ ಸಂಕಲ್ಪದAತೆ ರಥ ಎಳೆಯಬಹುದು. ರಥವನ್ನು ಎಳೆಯುವ ಅವಕಾಶ ದೊರೆತರೆ ಅದೇ ಭಕ್ತಿಗೆ ಅರ್ಪಿಸುವ ಸೇವೆಯಾಗಿದ್ದು, ಎಲ್ಲರೂ ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದರು.
ರಥದಾನಿ ಮುರಲೀಧರ ಎಕಲಾರಕರ್, ಡಾ. ಸಂಗ್ರಾಮ ಬಿರಾದಾರ, ಬಸವೇಶ್ವರ ಕೃಷಿ ಕೇಂದ್ರದ ರಾಜಶೇಖರ ಪಾಟೀಲ ರೂಡಗಿ, ಚನ್ನವೀರಯ್ಯ ಸ್ವಾಮಿ, ಎನ್.ಆರ್. ತಿವಾರಿ, ಬಸವಯ್ಯ ಹಿರೇಮಠ ಸೇರಿದಂತೆ ಶ್ರೀಮಠದ ಆಸ್ಥಾನದ ಸಾಧು-ಸಂತರು, ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಪಾಲ್ಗೊಂಡಿದ್ದರು.
ಗ್ರಾಮದ ಹಿರಿಯ ದೇವರಾಜ ಜವಳಿ, ಆಡಳಿತಾಧಿಕಾರಿ ಬಸವರಾಜ ಚೋಪಾಟೆ, ಶಾಲಾ ಆಡಳಿತಾಧಿಕಾರಿ ಸಿದ್ಧರಾಮ ಯಾದವಾಡ, ಯಲ್ಲಾಲಿಂಗ ಸಲಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಲಾವಿದ ಸಂಗಮೇಶ ಗವಾಯಿ, ಜಾನಪದ ಕಲಾವಿದ ತಾತ್ಯರಾವ್ ಪಾಟೀಲ ಹಾಗೂ ಶ್ರೀಮಠದ ಬಾಲ ಕಲಾಬಳಗದಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಸೋಮು ಹೊರಟಿ ನಿರೂಪಿಸಿದರು. ಶ್ರೀಮಠದ ಉಚಿತ ವಸತಿ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಅಚ್ಚುಕಟ್ಟಾಗಿ ಶ್ರಮಿಸಿದರು.