೧೯೪೭ರ ಆಗಸ್ಟ್ ೧೫ರಂದು ಇಡೀ ದೇಶ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯದ ಸಂಭ್ರಮದಲ್ಲಿ ತೇಲುತ್ತಿದ್ದರೆ, ಕಲ್ಯಾಣ ಕರ್ನಾಟಕದ ಜನತೆ ಗುಲಾಮಗಿರಿಯ ಕತ್ತಲಲ್ಲಿ ನರಳುತ್ತಿದ್ದರು. ಹೈದರಾಬಾದ್ ಸಂಸ್ಥಾನದ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಿದ್ದ. ಈ ಭೌಗೋಳಿಕ ಪ್ರದೇಶದ ಮೇಲೆ ತನ್ನ ಸ್ವತಂತ್ರ ಇಸ್ಲಾಮಿಕ್ ರಾಷ್ಟ್ರವನ್ನು ಸ್ಥಾಪಿಸುವ ಅವನ ದುರಾಸೆಯು ಒಂದು ಬೃಹತ್ ಐತಿಹಾಸಿಕ ಬಂಡಾಯಕ್ಕೆ ನಾಂದಿ ಹಾಡಿತು.
ರಜಾಕಾರರ ಅಟ್ಟಹಾಸ ಮತ್ತು ಬಂಡಾಯದ ಕಿಡಿ
ನಿಜಾಮನ ಬೆಂಬಲದೊಂದಿಗೆ ಖಾಸಿಂ ರಜ್ವಿ ಎಂಬ ಮತಾಂಧನ ನೇತೃತ್ವದಲ್ಲಿ ‘ರಜಾಕಾರರು’ ಎಂಬ ಖಾಸಗಿ ಸೇನೆ ಸೃಷ್ಟಿಯಾಯಿತು. ಹಳ್ಳಿಹಳ್ಳಿಗಳಲ್ಲಿ ಲೂಟಿ, ಅತ್ಯಾಚಾರ, ಬೆಂಕಿ ಹಚ್ಚುವಿಕೆ ಮತ್ತು ಅಮಾಯಕರ ಹತ್ಯೆಗಳು ನಿತ್ಯದ ಕಾಯಕವಾದವು. ಜನಸಾಮಾನ್ಯರ ಆಸ್ತಿಪಾಸ್ತಿಗಳು ಲೂಟಿಯಾದವು. ಈ ಭೀಕರ ದೌರ್ಜನ್ಯಗಳೇ ಅಮಾಯಕ ಜನಸಾಮಾನ್ಯರ ಎದೆಯಲ್ಲಿ ಸ್ವಾಭಿಮಾನದ ಬೃಹತ್ ಜ್ವಾಲೆಯನ್ನು ಹೊತ್ತಿಸಿದವು. ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಜನತೆ ತಮ್ಮ ರಕ್ಷಣೆಗಾಗಿ ತಾವೇ ಶಸ್ತ್ರ ಹಿಡಿಯುವ ಅನಿವಾರ್ಯತೆಗೆ ಸಿಲುಕಿದರು.
ಹೋರಾಟದ ಮುಂಚೂಣಿಗೆ ಬಂದ ವೀರರು
ಸ್ವಾಮಿ ರಮಾನಂದ ತೀರ್ಥರು ಈ ಹೋರಾಟದ ನೈತಿಕ ಮತ್ತು ಬೌದ್ಧಿಕ ಶಕ್ತಿಯಾಗಿ ನಿಂತರು. ಅವರ ಕರೆಯ ಮೇರೆಗೆ ಸಾವಿರಾರು ಯುವಕರು ಶಾಲಾ-ಕಾಲೇಜುಗಳನ್ನು ತೊರೆದು ಕ್ರಾಂತಿಯ ಹಾದಿ ಹಿಡಿದರು. ಸರ್ದಾರ್ ಶರಣಗೌಡ ಪಾಟೀಲರಂತಹ ನಾಯಕರು ತರುಣರನ್ನು ಸಂಘಟಿಸಿ ಸಶಸ್ತ್ರ ಹೋರಾಟಕ್ಕೆ ಇಳಿದರು. ಸಂಸ್ಥಾನದ ಗಡಿಭಾಗಗಳಲ್ಲಿ ಕ್ರಾಂತಿಕಾರಿಗಳು ಶಿಬಿರಗಳನ್ನು ತೆರೆದರು. ರಹಸ್ಯವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ, ರಜಾಕಾರರ ವಿರುದ್ಧ ಗೆರಿಲ್ಲಾ ಮಾದರಿಯ ದಾಳಿಗಳನ್ನು ನಡೆಸಿ ನಿಜಾಮನ ನಿದ್ದೆಗೆಡಿಸಿದರು. ರೈತರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಒಗ್ಗೂಡಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸೆಡ್ಡು ಹೊಡೆದರು.
ಉಕ್ಕಿನ ಮನುಷ್ಯನ ದಿಟ್ಟ ಹೆಜ್ಜೆ: ‘ಆಪರೇಷನ್ ಪೊಲೊ’
ಹೈದರಾಬಾದ್ ಸಂಸ್ಥಾನದ ಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲರು ದಿಟ್ಟ ನಿರ್ಧಾರ ಕೈಗೊಂಡರು. “ಹೈದರಾಬಾದ್ ಭಾರತದ ಹೊಟ್ಟೆಯಲ್ಲಿದ್ದ ಕ್ಯಾನ್ಸರ್ ಇದ್ದಂತೆ, ಅದಕ್ಕೆ ಶಸ್ತ್ರಚಿಕಿತ್ಸೆಯೇ ಏಕೈಕ ಪರಿಹಾರ” ಎಂದು ನಿರ್ಧರಿಸಿದರು. ೧೯೪೮ರ ಸೆಪ್ಟೆಂಬರ್ ೧೩ರಂದು ಭಾರತೀಯ ಸೇನೆಯು ಮೇಜರ್ ಜನರಲ್ ಜೆ.ಎನ್. ಚೌಧರಿ ಅವರ ನೇತೃತ್ವದಲ್ಲಿ ‘ಆಪರೇಷನ್ ಪೊಲೊ’ ಹೆಸರಿನಲ್ಲಿ ಹೈದರಾಬಾದ್ ಸಂಸ್ಥಾನದ ಮೇಲೆ ಮುಗಿಬಿದ್ದಿತು. ಟ್ಯಾಂಕರ್ಗಳು ಮತ್ತು ಫಿರಂಗಿಗಳೊಂದಿಗೆ ಮುನ್ನುಗ್ಗಿದ ಭಾರತೀಯ ಸೈನಿಕರ ಪರಾಕ್ರಮದ ಮುಂದೆ ನಿಜಾಮನ ಸೇನೆ ಅಕ್ಷರಶಃ ನಡುಗಿಹೋಯಿತು.
”ಸ್ವಾತಂತ್ರ್ಯವನ್ನು ಯಾರೂ ಭಿಕ್ಷೆಯಾಗಿ ನೀಡುವುದಿಲ್ಲ, ಅದನ್ನು ಹೋರಾಡಿಯೇ ದಕ್ಕಿಸಿಕೊಳ್ಳಬೇಕು” ಎಂಬ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮಾತು ಕಲ್ಯಾಣ ಕರ್ನಾಟಕದ ಈ ವಿಮೋಚನಾ ಹೋರಾಟಕ್ಕೆ ಅಕ್ಷರಶಃ ಅನ್ವಯಿಸುತ್ತದೆ.
ಶರಣಾಗತಿ ಮತ್ತು ಆ ಐತಿಹಾಸಿಕ ರೇಡಿಯೋ ಭಾಷಣ
ಭಾರತೀಯ ಸೇನೆಯ ಚಂಡಮಾರುತದಂತಹ ದಾಳಿಗೆ ನಿಜಾಮನ ಸೇನಾಪತಿ ಎಲ್ ಎದ್ರೂಸ್ ಮತ್ತು ರಜಾಕಾರರ ಪಡೆ ಕೇವಲ ೧೦೯ ಗಂಟೆಗಳಲ್ಲಿ ಧೂಳೀಪಟವಾಯಿತು. ಸೋಲು ಖಚಿತವಾದಾಗ ಸೆಪ್ಟೆಂಬರ್ ೧೭ರ ಸಂಜೆ, ಗರ್ವಭಂಗವಾದ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಡೆಕ್ಕನ್ ರೇಡಿಯೋ ನಿಲ್ದಾಣದ ಮೆಟ್ಟಿಲೇರಿದ. ನಡುಗುವ ದನಿಯಲ್ಲಿ, ತಾನು ಸಂಪೂರ್ಣವಾಗಿ ಸೋತಿರುವುದಾಗಿ ಮತ್ತು ಭಾರತೀಯ ಸೇನೆಗೆ ಶರಣಾಗುತ್ತಿರುವುದಾಗಿ ಆಕಾಶವಾಣಿಯಲ್ಲಿ ಘೋಷಿಸಿದ.
ರಜಾಕಾರರ ಸಂಘಟನೆಯನ್ನು ನಿಷೇಧಿಸಿ, ಭಾರತದ ಒಕ್ಕೂಟಕ್ಕೆ ಸೇರುತ್ತಿರುವ ಆ ಐತಿಹಾಸಿಕ ರೇಡಿಯೋ ಭಾಷಣ ಲಕ್ಷಾಂತರ ಜನರ ಶತಮಾನಗಳ ಗುಲಾಮಗಿರಿಯ ಅಂತ್ಯದ ದಿವ್ಯ ಸಂಕೇತವಾಗಿದೆ. ಹೀಗೆ, ಅಸಂಖ್ಯಾತ ವೀರರ ಶ್ರಮ, ತ್ಯಾಗ ಮತ್ತು ಬಲಿದಾನದಿಂದ ಪಡೆದ ಈ ವಿಮೋಚನೆಯು ಕಲ್ಯಾಣ ಕರ್ನಾಟಕದ ಮಣ್ಣಿನಲ್ಲಿ ಸುವರ್ಣಾಕ್ಷರಗಳಲ್ಲಿ ಅಚ್ಚಳಿಯದೆ ಉಳಿದಿದೆ.
ಶಿವರಾಜ ಸೂ. ಸಣಮನಿ, ಮದಗುಣಕಿ