ಆಳಂದ: ರೈತರ ಜಮೀನು ಮೋಸ ಪ್ರಕರಣ — ಬೇಡಿಕೆ ಈಡೇರದಿದ್ದರೆ ಅ.೨ರಂದು ಡಿಸಿ ಕಚೇರಿಗೆ ಪಾದಯಾತ್ರೆ: ಬಸವರಾಜ ಕೊರಳ್ಳಿ ಎಚ್ಚರಿಕೆ
ಆಳಂದ: ತಹಸೀಲ್ದಾರ್ ಕಚೇರಿ ಎದುರು ಕಲ್ಯಾಣ ಜನಪರ ವೇದಿಕೆ ರಾಜ್ಯಾಧ್ಯಕ್ಷ ಬಸವರಾಜ ಎಸ್. ಕೊರಳ್ಳಿ ನೇತೃತ್ವದಲ್ಲಿ ರೈತರು ಸೋಲಾರ್ ಕಂಪನಿಗಳ ವಿರುದ್ಧ ಧರಣಿ ನಡೆಸಿ ಗ್ರೇಡ್–೨ ತಹಸೀಲ್ದಾರ್ ಮಲ್ಲಿಕಾರ್ಜುನ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಪವನ ವಿದ್ಯುತ್ ಕಂಪನಿಗಳ ವಿರುದ್ಧ ತಹಸೀಲ್ದಾರ ಕಚೇರಿ ಮುಂದೆ ಧರಣಿ ಸತ್ಯಾಗ್ರಹ
ಆಳಂದ: ತಾಲೂಕಿನ ರೈತರ ಜಮೀನಿಗೆ (ಬ್ಲೂ-ಪೈನ) ಮೆ. ಸೋಲಾರ್ ಕ್ರಾಫ್ಟ್ ಪವರ್ ಇಂಡಿಯಾ-೭ ಮತ್ತು ೧೬ ಪ್ರೆöÊವೇಟ್ ಲಿಮಿಟೆಡ್ ಕಂಪನಿಗಳು ರೈತರಿಗೆ ಮೋಸ ಮಾಡಿ ಕಡಿಮೆ ಬೆಲೆಗೆ ಜಮೀನು ಖರೀದಿಸಿವೆ ಎಂದು ಆರೋಪಿಸಿ, ಕಲ್ಯಾಣ ಜನಪರ ವೇದಿಕೆ ರಾಜ್ಯಾಧ್ಯಕ್ಷ ಬಸವರಾಜ ಎಸ್. ಕೊರಳ್ಳಿ ನೇತೃತ್ವದಲ್ಲಿ ಮಂಗಳವಾರ ತಹಸೀಲ್ದಾರ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಆಳಂದ ತಾಲೂಕಿನಲ್ಲಿ ಪವನ ವಿದ್ಯುತ್ ಯೋಜನೆಗಾಗಿ ಜಮೀನು ಖರೀದಿಸಿದ ಈ ಕಂಪನಿಗಳು, ಕಾನೂನಿನ ನಿಯಮಗಳ ಸರಿಯಾದ ಮಾಹಿತಿ ನೀಡದೆ ದಳ್ಳಾಳಿಗಳ ಮೂಲಕ ರೈತರ ಜಮೀನುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿವೆ ಎಂದು ವೇದಿಕೆ ಆರೋಪಿಸಿದೆ. ಇತರ ಜಿಲ್ಲೆಗಳಲ್ಲಿ ಇದೇ ಕಂಪನಿ ಪ್ರತಿ ಎಕರೆಗೆ ೪೫ರಿಂದ ೫೦ ಲಕ್ಷ ರೂ. ನೀಡಿ ಜಮೀನು ಖರೀದಿಸಿದ್ದರೆ, ಆಳಂದ ತಾಲೂಕಿನ ರೈತರಿಗೆ ಕೇವಲ ೮ರಿಂದ ೧೫ ಲಕ್ಷ ರೂ. ಮಾತ್ರ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ರೈತರ ಜಮೀನುಗಳನ್ನು ಕಾನೂನುಬಾಹಿರವಾಗಿ ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿ ಮೋಸ ಮಾಡಲಾಗಿದೆ ಎಂದೂ ಆರೋಪಿಸಲಾಗಿದ್ದು, ಇದಕ್ಕೆ ಕಾರಣರಾದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಲಾಯಿತು.
೨೫ ದಿನಗಳ ಗಡುವು ಮೀರಿದ ಹಿನ್ನೆಲೆ
ಆಗಸ್ಟ್ ೧೩ರಂದು ತಹಸೀಲ್ದಾರರು ಕಂಪನಿ ವ್ಯವಸ್ಥಾಪಕರನ್ನು ಕರೆಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿ, ವೇದಿಕೆಯ ಮನವಿ ಮೇರೆಗೆ ೨೫ ದಿನಗಳ ಕಾಲಾವಕಾಶ ನೀಡಿದ್ದರು. ಸೆಪ್ಟೆಂಬರ್ ೭ರೊಳಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸೆ.೧೫ರಂದು ಧರಣಿ ನಡೆಸಲಾಯಿತು.
ಪಾದಯಾತ್ರೆ ಎಚ್ಚರಿಕೆ
ಅಕ್ಟೋಬರ್ ೧ರೊಳಗೆ ರೈತರಿಗಾಗಿರುವ ಅನ್ಯಾಯ ಸರಿಪಡಿಸದಿದ್ದರೆ, ಅಕ್ಟೋಬರ್ ೨ರಂದು ಆಳಂದ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ನಡೆಸಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಕೊರಳ್ಳಿ ಎಚ್ಚರಿಕೆ ನೀಡಿದರು.
ನಿಯಮ ಉಲ್ಲಂಘಿಸಿ ನಡೆಯುತ್ತಿರುವ ಎರಡೂ ಕಂಪನಿಗಳ ಕಾಮಗಾರಿ ಸ್ಥಗಿತಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು
ಖರೀದಿಸಿದ ಜಮೀನಿಗೆ ಪ್ರತಿ ಎಕರೆಗೆ ೪೫ ಲಕ್ಷ ರೂ. ನೀಡಬೇಕು
ಒಪ್ಪಂದ ಮಾಡಿಕೊಂಡ ಜಮೀನಿಗೆ ಪ್ರತಿ ಎಕರೆಗೆ ವಾರ್ಷಿಕ ೫೦,೦೦೦ ರೂ. ನೀಡಬೇಕು ಎಂದು ಆಗ್ರಹಿಸಿದರು.
ಗ್ರೇಡ್-೨ ತಹಸೀಲ್ದಾರ ಮಲ್ಲಿಕಾರ್ಜುನ ಪಾಟೀಲ ಅವರಿಗೆ ಧರಣಿನಿರತರು ಮನವಿ ಸಲ್ಲಿಸಿದರು. ವೇದಿಕೆಯ ರಾಜ್ಯ ಕಾರ್ಯದರ್ಶಿ ಶರಣು ಕುಲಕರ್ಣಿ, ಜಿಲ್ಲಾಧ್ಯಕ್ಷ ನಾಗರಾಜ ಘೋಡಕೆ, ತಾಲೂಕು ಅಧ್ಯಕ್ಷ ಬೀರಣ್ಣಾ ಭೂಸನೂರ, ಉಪಾಧ್ಯಕ್ಷ ಬಸವರಾಜ ಘಂಟೆ, ಜಿಲ್ಲಾ ಸಂಚಾಲಕ ಸೋಮಯ್ಯಾ ಸ್ವಾಮಿ, ಮುಖಂಡರಾದ ಗಂಗಾಧರ ಕುಂಬಾರ, ಸಂದೀಪ ಭೀಮಳ್ಳಿ ಸೇರಿದಂತೆ ಇತರ ಕಾರ್ಯಕರ್ತರು, ಮುಖಂಡರು ಮತ್ತು ರೈತರು ಪಾಲ್ಗೊಂಡಿದ್ದರು.