ಜೇವರ್ಗಿ: ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಜೇವರ್ಗಿ ಪುರಸಭೆಯ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಅವರ ವಯೋನಿವೃತ್ತಿ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರ ವತಿಯಿಂದ ಅದ್ದೂರಿಯಾಗಿ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜೇವರ್ಗಿ ತಾಲೂಕು ಅಧ್ಯಕ್ಷ ದಾನಪ್ಪಗೌಡ ಹಳಿಮನಿ, ಶಂಭುಲಿಂಗ ದೇಸಾಯಿ ಅವರು ಜೇವರ್ಗಿ ಪುರಸಭೆಯ ಮುಖ್ಯಾಧಿಕಾರಿಯಾಗಿ ಮೂರು ವರ್ಷಗಳ ಕಾಲ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.
“ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ದೇಸಾಯಿ ಅವರು ಪಟ್ಟಣದ ಸ್ವಚ್ಛತೆ ಹಾಗೂ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಇಂತಹ ದಕ್ಷ ಅಧಿಕಾರಿಗಳು ಇನ್ನೂ ಕೆಲಕಾಲ ಜೇವರ್ಗಿಯಲ್ಲಿ ಸೇವೆ ಸಲ್ಲಿಸಬೇಕಿತ್ತು. ಆದರೆ, ಸರ್ಕಾರದ ನಿಯಮದಂತೆ 60 ವರ್ಷ ಪೂರ್ಣಗೊಂಡ ಬಳಿಕ ವಯೋನಿವೃತ್ತಿ ಹೊಂದುವುದು ಅನಿವಾರ್ಯ,” ಎಂದರು.
ಅಧಿಕಾರದಲ್ಲಿರುವ ಸಂದರ್ಭದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಬೇಕು ಎಂಬ ಮಾತಿನಂತೆ ದೇಸಾಯಿ ಅವರು ಜೇವರ್ಗಿ ಸೇರಿದಂತೆ ಹುಮನಾಬಾದ್, ಶಹಾಪುರ ಹಾಗೂ ಬೀದರ್‌ನಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಜೇವರ್ಗಿಯಲ್ಲಿಯೂ ಉತ್ತಮ ಕಾರ್ಯನಿರ್ವಹಿಸಿ ಜನರ ವಿಶ್ವಾಸ ಗಳಿಸಿದ್ದಾರೆ. ಅವರ ಮುಂದಿನ ನಿವೃತ್ತಿ ಜೀವನ ಸುಖ, ಶಾಂತಿ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಭುಲಿಂಗ ದೇಸಾಯಿ, ಜೇವರ್ಗಿಯಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ತಮ್ಮ ಜೀವನದ ಆತ್ಮತೃಪ್ತಿಯ ಅವಧಿಯಾಗಿದೆ ಎಂದು ಹೇಳಿದರು.
“ಜೇವರ್ಗಿ ಪುರಸಭೆಯ 23 ವಾರ್ಡ್‌ಗಳ ಸದಸ್ಯರು, ಪೌರಕಾರ್ಮಿಕರು ಹಾಗೂ ಸಿಬ್ಬಂದಿ ಮೂರು ವರ್ಷಗಳ ಅವಧಿಯಲ್ಲಿ ಆಡಳಿತ ನಡೆಸಲು ಉತ್ತಮ ಸಹಕಾರ ನೀಡಿದ್ದಾರೆ. ಪಟ್ಟಣದ ಸಾರ್ವಜನಿಕರೂ ಉತ್ತಮವಾಗಿ ಸ್ಪಂದಿಸಿದ್ದಾರೆ. ಸಿಬ್ಬಂದಿಯು ನನ್ನನ್ನು ತಮ್ಮ ಮನೆಯ ಹಿರಿಯ ಸಹೋದರನಂತೆ ಕಂಡು, ನಾನು ನೀಡಿದ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು,” ಎಂದರು.
ಈ ಸಂದರ್ಭದಲ್ಲಿ ಶಹಾಬಾದ್ ಪುರಸಭೆ ಮುಖ್ಯಾಧಿಕಾರಿ ಮನೋಜ್ ಕುಮಾರ್ ಗುರುಕಾರ್, ಉದಯ್‌ಸಿಂಗ್ ಠಾಕೂರ್, ಶ್ರೀನಿವಾಸ್ ಸೂರ್ಯನ್, ರಾಜಶೇಖರ್ ಪಾಟೀಲ್, ಪೀರ್‌ಶೆಟ್ಟಿ, ಸವಿತಾಬಾಯಿ, ಮುನಿಷಾ, ಸುನಂದ, ಶಾರದಾ, ಮಲ್ಲಿಕಾರ್ಜುನ್, ಅರುಣ್ ಕುಮಾರ್, ಮೊಹಮ್ಮದ್ ಸಿರಾಜ್ ಬಡಾಗರ್, ಮಲ್ಲಿಕಾರ್ಜುನ್ ಹೆಗಡೆ, ಯಂಕಪ್ಪ ಮಡಿವಾಳಕರ್, ಧರ್ಮಣ್ಣ ರಾಥೋಡ್, ದೇವು, ಬಸವರಾಜ್, ರಮೇಶ್, ಗುಂಡಣ್ಣ, ಗಿರೀಶ್, ಸಂದೀಪ್ ಸೇರಿದಂತೆ ಪುರಸಭೆ ಸಿಬ್ಬಂದಿ, ಪೌರಕಾರ್ಮಿಕರು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.