ಸರ್ಕಾರದ ನಿರ್ಧಾರಕ್ಕೆ ಬೇಸರ; ಪಾದಯಾತ್ರೆ ಜನರ ಗಮನ ಬೇರೆಡೆ ಸೆಳೆಯುವ ನಾಟಕ: ಗುತ್ತೇದಾರ
ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಆಳಂದ ಕೈಬಿಟ್ಟಿರುವುದು ಖಂಡನೀಯ: ಮಾಜಿ ಶಾಸಕ ಸುಭಾಷ ಗುತ್ತೇದಾರ
ಬರದ ತೀವ್ರ ಸಂಕಷ್ಟ ಎದುರಿಸುತ್ತಿರುವ ಆಳಂದ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಅತ್ಯಂತ ಖಂಡನೀಯ ಹಾಗೂ ಆಳಂದ ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಳಂದ ತಾಲೂಕಿನ ರೈತರು ಮಳೆ ಕೊರತೆ, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳ ಮೇವಿನ ಕೊರತೆಯಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಆಳಂದವನ್ನು ಕೈಬಿಟ್ಟಿರುವುದು ಸರ್ಕಾರದ ರೈತಪರ ಕಾಳಜಿಯನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಮೂವರು ಪ್ರಭಾವಿ ಸಚಿವರು ಇದ್ದರೂ ಕಲಬುರಗಿ ಜಿಲ್ಲೆಯ ಒಂದೇ ಒಂದು ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗದಿರುವುದು ಜಿಲ್ಲೆಯ ಪಾಲಿಗೆ ದುರಂತವೇ ಸರಿ. ಜಿಲ್ಲೆಯ ಜನರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಕಲ್ಪಿಸುವಲ್ಲಿ ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಇದು ಜಿಲ್ಲೆಯ ರೈತರ ದುರ್ದೈವ ಎಂದು ಅವರು ಟೀಕಿಸಿದ್ದಾರೆ.
ಪಾದಯಾತ್ರೆ ಕೇವಲ ಜನರ ಗಮನ ಬೇರೆಡೆ ಸೆಳೆಯುವ ತಂತ್ರ
ಪೈಪ್ಲೈನ್ ಕಾಮಗಾರಿಗಾಗಿ ನಡೆಸುತ್ತಿರುವ ಪಾದಯಾತ್ರೆ ಹಾಗೂ ಪ್ರತಿಭಟನೆಗಳು ಜನರ ಗಮನವನ್ನು ನೈಜ ಸಮಸ್ಯೆಯಿಂದ ಬೇರೆಡೆ ಸೆಳೆಯುವ ರಾಜಕೀಯ ನಾಟಕವಾಗಿವೆ. ತಮ್ಮದೇ ಸರ್ಕಾರದ ಮುಂದೆ ತಮ್ಮ ತಾಲೂಕಿನ ರೈತರಿಗೆ ನ್ಯಾಯ ಕೊಡಿಸಲು ಸಾಧ್ಯವಾಗದವರು ಪಾದಯಾತ್ರೆ ನಡೆಸಿ ಯಾರಿಗೆ ನ್ಯಾಯ ಕೊಡಿಸುತ್ತಾರೆ? ಎಂದು ಸುಭಾಷ ಗುತ್ತೇದಾರ ಪ್ರಶ್ನಿಸಿದ್ದಾರೆ.
ಶಾಸಕರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ, ಸರ್ಕಾರದ ಮೇಲೆ ಪರಿಣಾಮಕಾರಿ ಒತ್ತಡ ಹೇರಿ ಆಳಂದವನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಮಾಡಬೇಕು. ಕೇವಲ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ಮತ್ತು ಪಾದಯಾತ್ರೆ ನಡೆಸುವುದರಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕೆರೆ ತುಂಬಿಸುವ ಯೋಜನೆಯಲ್ಲೂ ರಾಜಕೀಯ ಮಾಡಬಾರದು
ತಮ್ಮ ಅವಧಿಯಲ್ಲಿ ಕೆರೆ ತುಂಬಿಸುವ ಯೋಜನೆಗೆ ಸಂಬAಧಿಸಿದAತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಯಾವುದೇ ಅನಗತ್ಯ ಒತ್ತಡ ಹೇರದೆ, ಯೋಜನೆಯ ಕಾಮಗಾರಿಗಳು ನಿಯಮಾನುಸಾರ ನಡೆಯುವಂತೆ ನೋಡಿಕೊಂಡಿದ್ದೆ. ಅಧಿಕಾರಿಗಳ ಮೇಲೆ ಅಥವಾ ಗುತ್ತಿಗೆದಾರರ ಮೇಲೆ ವೈಯಕ್ತಿಕ ಪ್ರಭಾವ ಬೀರಿದೆ ಎಂಬ ಆರೋಪ ಬರಬಾರದು ಹಾಗೂ ಯಾವುದೇ ಆಮಿಷಕ್ಕೆ ಒಳಗಾದೆ ಎಂಬ ಅಪವಾದಕ್ಕೆ ಅವಕಾಶ ಕೊಡಬಾರದು ಎಂಬ ಕಾರಣದಿಂದಲೇ ನಾನು ಎಚ್ಚರಿಕೆಯಿಂದ ನಡೆದುಕೊಂಡಿದ್ದೆ.
ಸಾರ್ವಜನಿಕ ಯೋಜನೆಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕಿಂತ ಪಾರದರ್ಶಕತೆ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡುವುದು ನನ್ನ ನಿಲುವಾಗಿತ್ತು. ಆದರೆ ಈಗ ಹಿಂದಿನ ವಿಚಾರಗಳನ್ನು ತಿರುಚಿ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಬೆಳೆ ವಿಮೆಯಲ್ಲೂ ಅನ್ಯಾಯ; ಈಗ ಬರ ಘೋಷಣೆಯಲ್ಲೂ ಅನ್ಯಾಯ
ಆಳಂದ ವಿಧಾನಸಭಾ ಕ್ಷೇತ್ರದ ರೈತರಿಗೆ ಬೆಳೆ ವಿಮೆ ವಿಷಯದಲ್ಲಿಯೂ ಅನ್ಯಾಯವಾಗಿದೆ. ಸಾಕಷ್ಟು ರೈತರು ಬೆಳೆ ನಷ್ಟ ಅನುಭವಿಸಿದ್ದರೂ ಅವರಿಗೆ ಸಮರ್ಪಕ ಪರಿಹಾರ ದೊರೆಯಲಿಲ್ಲ. ಈಗ ಮತ್ತೊಮ್ಮೆ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಆಳಂದವನ್ನು ಕೈಬಿಡುವ ಮೂಲಕ ರೈತರ ಗಾಯದ ಮೇಲೆ ಸರ್ಕಾರ ಉಪ್ಪು ಸವರಿದಂತಾಗಿದೆ.
ಆಳAದದ ರೈತರ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪರಿಣಾಮಕಾರಿಯಾಗಿ ಮಂಡಿಸಿ, ಸರ್ಕಾರದಿಂದ ಪರಿಹಾರ ಹಾಗೂ ವಿಶೇಷ ಪ್ಯಾಕೇಜ್ ತರುವ ಜವಾಬ್ದಾರಿ ಶಾಸಕರದ್ದಾಗಿದೆ. ಆದರೆ ಆ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸದೆ ಕೇವಲ ಬಾಯಿ ಮಾತಿನಲ್ಲಿ ರೈತರ ಪರ ನಿಲ್ಲುವ ನಾಟಕ ಮಾಡಲಾಗುತ್ತಿದೆ ಎಂದು ಗುತ್ತೇದಾರ ಆರೋಪಿಸಿದ್ದಾರೆ.
“ಕುಣಿಯುವುದಕ್ಕೆ ಬರಲಾರದೆ ನೆಲ ಡೊಂಕು” ಎಂಬAತಾಗಿದೆ
ಶಾಸಕ ಬಿ.ಆರ್. ಪಾಟೀಲರ ಹೇಳಿಕೆಗಳನ್ನು ಗಮನಿಸಿದರೆ “ಕುಣಿಯುವುದಕ್ಕೆ ಬರಲಾರದೆ ನೆಲ ಡೊಂಕು” ಎಂಬ ಗಾದೆ ನೆನಪಾಗುತ್ತದೆ. ತಮ್ಮ ವೈಫಲ್ಯಗಳನ್ನು ಒಪ್ಪಿಕೊಳ್ಳುವ ಬದಲು ಪ್ರತಿಯೊಂದು ವಿಚಾರದಲ್ಲೂ ಬಿಜೆಪಿಯವರು ಹಾಗೂ ವಿರೋಧ ಪಕ್ಷದವರ ಮೇಲೆ ಆರೋಪ ಮಾಡುವುದು ಶಾಸಕರ ಚಾಳಿಯಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಜನಪ್ರತಿನಿಧಿಯಾಗಿ ಅಧಿಕಾರದಲ್ಲಿರುವವರು ತಮ್ಮ ವೈಫಲ್ಯಕ್ಕೆ ಬೇರೆಯವರನ್ನು ಹೊಣೆ ಮಾಡುವ ಬದಲು ತಮ್ಮ ಕಾರ್ಯಕ್ಷಮತೆಯನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಳಂದದ ರೈತರು ಸಂಕಷ್ಟದಲ್ಲಿರುವಾಗ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಸಮಯ ವ್ಯರ್ಥ ಮಾಡದೆ ಸರ್ಕಾರದ ಮೇಲೆ ಒತ್ತಡ ಹೇರಿ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ
ಆಳಂದ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲು ವಿಫಲವಾಗಿರುವುದು ಶಾಸಕರ ರಾಜಕೀಯ ಹಾಗೂ ಆಡಳಿತಾತ್ಮಕ ವೈಫಲ್ಯವಾಗಿದೆ. ರೈತರಿಗೆ ಬೆಳೆ ವಿಮೆ, ಬರ ಪರಿಹಾರ ಸೇರಿದಂತೆ ನಿರಂತರವಾಗಿ ಅನ್ಯಾಯವಾಗುತ್ತಿದ್ದರೂ ಅದನ್ನು ತಡೆಯುವಲ್ಲಿ ಶಾಸಕರು ವಿಫಲರಾಗಿದ್ದಾರೆ.
ತಮ್ಮ ಕ್ಷೇತ್ರದ ರೈತರ ಹಿತ ಕಾಪಾಡಲು ಸಾಧ್ಯವಾಗದಿದ್ದರೆ, ಈ ವೈಫಲ್ಯದ ನೈತಿಕ ಹೊಣೆ ಹೊತ್ತು ಶಾಸಕ ಬಿ.ಆರ್. ಪಾಟೀಲರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂಬುದು ಅವರಿಗೆ ತಿಳಿದಿದ್ದರೂ, ಕನಿಷ್ಠ ತಮ್ಮ ವೈಫಲ್ಯದ ಹೊಣೆಗಾರಿಕೆಯನ್ನು ಒಪ್ಪಿಕೊಂಡAತಾಗುತ್ತದೆ ಎಂದು ಸುಭಾಷ ಗುತ್ತೇದಾರ ಹೇಳಿದ್ದಾರೆ.
ಆಳಂದವನ್ನು ತಕ್ಷಣವೇ ಬರಪೀಡಿತ ತಾಲೂಕು ಎಂದು ಘೋಷಿಸಿ, ರೈತರಿಗೆ ಬೆಳೆ ನಷ್ಟ ಪರಿಹಾರ, ಬೆಳೆ ವಿಮೆ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಅಗತ್ಯವಿರುವ ಎಲ್ಲ ರೀತಿಯ ಸರ್ಕಾರಿ ನೆರವು ಒದಗಿಸಬೇಕು. ಇಲ್ಲವಾದರೆ ರೈತರ ಪರವಾಗಿ ಮತ್ತಷ್ಟು ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.