Shubhashaya News

ಸಿರಪುರ ಮಾದರಿ ಅವೈಜ್ಞಾನಿಕ; ಕೆಕೆಆರ್‌ಡಿಬಿಯ ೧೦ ಸಾವಿರ ಕೋಟಿ ಯೋಜನೆಗೆ ಕಿಸಾನಸಭಾ ಆಕ್ಷೇಪ

ಅಂತರ್ಜಲ ವೃದ್ಧಿಗೆ ಹಣಮಂತರಾವ್ ಸಮಿತಿ ಮಾರ್ಗಸೂಚಿ ಜಾರಿಗೊಳಿಸಿ

ಆಳಂದ: ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಮಾತನಾಡಿದರು. ಚಂದ್ರಕಾAತ ಖೋಬ್ರೆ, ಧರ್ಮಣ್ಣ ಪೂಜಾರಿ ಮತ್ತಿತರರು ಇದ್ದರು.

ಆಳಂದ: ಕಲ್ಯಾಣ ಕರ್ನಾಟಕದಲ್ಲಿ ಅಂತರ್ಜಲ ವೃದ್ಧಿಗಾಗಿ ಸಿರಪುರ ಮಾದರಿಯಲ್ಲಿ ೧೦ ಸಾವಿರ ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳುವ ನಿರ್ಧಾರ ಅವೈಜ್ಞಾನಿಕವಾಗಿದ್ದು, ಸಾರ್ವಜನಿಕ ಹಣದ ಸದ್ಬಳಕೆಯ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಕಿಸಾನಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಿಪಿಐ ಹಾಗೂ ಕಿಸಾನಸಭಾ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ನಡೆದ ಕೆಕೆಆರ್‌ಡಿಬಿ ಸಭೆಯಲ್ಲಿ ಸಿರಪುರ ಮಾದರಿಯ ಅಂತರ್ಜಲ ವೃದ್ಧಿ ಕಾಮಗಾರಿಗಳಿಗೆ ೧೦ ಸಾವಿರ ಕೋಟಿ ಅನುದಾನ ಮೀಸಲಿಡುವ ಕುರಿತು ಚರ್ಚೆ ನಡೆದಿದೆ. ಆದರೆ, ಈ ಮಾದರಿಯ ಕಾಮಗಾರಿಗಳಿಗೆ ಯಾವ ವೈಜ್ಞಾನಿಕ ಅಧ್ಯಯನದ ಆಧಾರವಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಹಣಮಂತರಾವ್ ಸಮಿತಿ ಶಿಫಾರಸೇ ವೈಜ್ಞಾನಿಕ: ೧೯೮೭ರಲ್ಲಿ ಹಣಮಂತರಾವ್ ಸಮಿತಿ ನೀಡಿರುವ ಅಂತರ್ಜಲ ಸಂರಕ್ಷಣೆ ಹಾಗೂ ವೃದ್ಧಿಯ ಮಾರ್ಗಸೂಚಿಗಳನ್ನು ಸರ್ಕಾರ ಅನುಷ್ಠಾನಗೊಳಿಸಬೇಕು. ನೀರಿನ ಸಂಗ್ರಹ ಹಾಗೂ ಮರುಪೂರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಸಿರಪುರ ಮಾದರಿಯ ಕಾಮಗಾರಿಗಳಲ್ಲಿ ಮಣ್ಣು, ಹೂಳು ತುಂಬಿಕೊAಡು ನೀರು ಸಂಗ್ರಹ ಸಾಮರ್ಥ್ಯ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಬ್ರೀಜ್-ಕಂ-ಬ್ಯಾರೇಜ್ ಮತ್ತು ಕೆಟಿವೇರ್‌ಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ, ಆಳವಾಗಿ ನೀರು ಸಂಗ್ರಹವಾಗುವAತೆ ಕ್ರಮ ಕೈಗೊಳ್ಳಬೇಕು ಎಂದರು.
ಹತ್ತು ವರ್ಷ ನಿರಂತರ ಯೋಜನೆ ಅಗತ್ಯ: ಮುಂದಿನ ಹತ್ತು ವರ್ಷಗಳ ಕಾಲ ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಿ, ಪ್ರತಿ ತಾಲೂಕಿನಲ್ಲಿ ಅಗತ್ಯವಿರುವ ಕಡೆ ಬ್ರೀಜ್-ಕಂ-ಬ್ಯಾರೇಜ್, ಕೆಟಿವೇರ್ ಸೇರಿದಂತೆ ಜಲಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಬೇಕು. ನೀರು ಸಂಗ್ರಹವಾಗುವ ಪ್ರದೇಶಗಳನ್ನು ಗುರುತಿಸಿ, ವೈಜ್ಞಾನಿಕವಾಗಿ ಆಳಗೊಳಿಸುವ ಮೂಲಕ ನೀರು ಇಂಗುವ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ರೈತರ ಕೃಷಿಗೆ ಮಾತ್ರವಲ್ಲದೆ ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ನೀರಿನ ಸಮಸ್ಯೆ ರಾಜಕೀಯಕ್ಕೆ ಸೀಮಿತವಾಗಬಾರದು: ನೀರಿನ ಸಮಸ್ಯೆಯನ್ನು ಮುಂದಿಟ್ಟುಕೊAಡು ಅಧಿಕಾರಕ್ಕಾಗಿ ನಡೆಯುವ ರಾಜಕೀಯ ಹೋರಾಟಗಳಿಂದ ಜನರ ಸಮಸ್ಯೆ ಬಗೆಹರಿಯುವುದಿಲ್ಲ. ಹೋರಾಟಗಳು ಕೇವಲ ಹೇಳಿಕೆ, ಪ್ರತಿಭಟನೆಗಳಿಗೆ ಸೀಮಿತವಾಗದೆ, ಕಾಮಗಾರಿ ಅನುಷ್ಠಾನಗೊಳ್ಳುವವರೆಗೆ ನಿರಂತರವಾಗಿರಬೇಕು. ಬರ ನಿವಾರಣೆಗೆ ವೈಜ್ಞಾನಿಕ ಹಾಗೂ ವಾಸ್ತವಿಕ ಪರಿಹಾರ ಒದಗಿಸುವುದೇ ಜನಪರ ಹೋರಾಟದ ಉದ್ದೇಶವಾಗಬೇಕು ಎಂದು ಮೌಲಾ ಮುಲ್ಲಾ ಹೇಳಿದರು.
ಅಂತರ್ಜಲ ಸಂರಕ್ಷಣೆ ಮತ್ತು ಮರುಪೂರಣಕ್ಕೆ ಹಣಮಂತರಾವ್ ಸಮಿತಿ ಶಿಫಾರಸುಗಳನ್ನು ಹಿಂದೆಯೇ ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದರೆ ಇಂದಿನ ನೀರಿನ ಬಿಕ್ಕಟ್ಟು ಇಷ್ಟು ತೀವ್ರವಾಗುತ್ತಿರಲಿಲ್ಲ. ಈಗಲಾದರೂ ಸರ್ಕಾರ ಸಮಿತಿಯ ಮಾರ್ಗಸೂಚಿಗಳನ್ನು ಆಧಾರವಾಗಿಸಿಕೊಂಡು ಕಲ್ಯಾಣ ಕರ್ನಾಟಕಕ್ಕೆ ಸಮಗ್ರ ಜಲಸಂರಕ್ಷಣಾ ಯೋಜನೆ ರೂಪಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಿಸಾನಸಭಾ ಗೌರವ ಅಧ್ಯಕ್ಷ ಚಂದ್ರಕಾAತ ಖೋಬ್ರೆ, ಅಧ್ಯಕ್ಷ ಧರ್ಮಣ್ಣ ಪೂಜಾರಿ, ರತನ ಕಲಶೆಟ್ಟಿ, ಮಹಾದೇವ ಮಂಟಗಿ, ಖಲೀಲ್ ಅನ್ಸಾರಿ, ಮಲ್ಲಿನಾಥ ಯಲಶಟ್ಟಿ, ಕಬೀರಾ ಆಪಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.