Shubhashaya News

ಸಾಹಿತ್ಯ–ಸಾಂಸ್ಕೃತಿಕ ಬದುಕು ನಮ್ಮದಾಗಲಿ: ತೆಲ್ಕೂರ

ಕಲಬುರಗಿ: ಕನ್ನಡ ನಾಡು-ನುಡಿ, ನೆಲ-ಜಲವನ್ನು ಪ್ರೀತಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಬೇಕು. ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಮೂಲಕವೇ ನಮ್ಮ ಸಾಂಸ್ಕೃತಿಕ ಬದುಕನ್ನು ಮತ್ತಷ್ಟು ಶ್ರೀಮಂತಗೊಳಿಸಬಹುದು. ಇಂದಿನ ಸಾಮಾಜಿಕ ಸಮಸ್ಯೆಗಳಿಗೆ ಸಾಹಿತ್ಯದಲ್ಲಿ ಪರಿಹಾರದ ಮಾರ್ಗಗಳನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾ ಬಿಜೆಪಿ ಗ್ರಾಮಾಂತರ ಉಪಾಧ್ಯಕ್ಷೆ ಸಂತೋಷಿರಾಣಿ ಪಾಟೀಲ ತೆಲ್ಕೂರ ಹೇಳಿದರು.

ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್, ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ‘ಕಲಬುರಗಿ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮ ನೆಲದ ಹಿರಿಮೆಯನ್ನು ಪ್ರತಿಬಿಂಬಿಸುವ ಪ್ರಮುಖ ಅಂಶಗಳಾಗಿವೆ. ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಕಲಬುರಗಿ ಸಾಹಿತ್ಯ ಸಂಭ್ರಮ ಹೊಸ ಸ್ಪೂರ್ತಿ ನೀಡಿದೆ ಎಂದು ಅವರು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ನಾಡು-ನುಡಿ ಹಾಗೂ ಸಂಸ್ಕೃತಿಯ ಬೆಳವಣಿಗೆಯ ಜೊತೆಗೆ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಸಾಹಿತ್ಯ ಸಂಭ್ರಮಗಳು ಅಗತ್ಯವಾಗಿವೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಉಳಿವಿನಲ್ಲಿ ಕಲಬುರಗಿ ಜಿಲ್ಲೆಯ ಬರಹಗಾರರ ಕೊಡುಗೆ ಮಹತ್ವದ್ದಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಾಮಾಜಿಕ ನ್ಯಾಯದ ಆಶಯದೊಂದಿಗೆ ಮುನ್ನಡೆಯುತ್ತಿದೆ ಎಂದರು.

ಸಂಶೋಧಕ ಮುಡುಬಿ ಗುಂಡೇರಾವ ಉಪನ್ಯಾಸ ನೀಡಿ, ಕಲಬುರಗಿ ನೆಲದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕನ್ನಡದ ಕೀರ್ತಿಯನ್ನು ಹೆಚ್ಚಿಸಿದ ರಾಷ್ಟ್ರಕೂಟರು ಹಾಗೂ ಚಾಲುಕ್ಯರ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.

ಕನ್ನಡದ ಪ್ರಥಮ ಕೃತಿ ‘ಕವಿರಾಜಮಾರ್ಗ’ ರಚನೆಯಾದ ಈ ಪುಣ್ಯಭೂಮಿ ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿದೆ. ಕಲಬುರಗಿ ನೆಲವು ಕನ್ನಡ ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದ್ದು, ಇದರ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಮಂಜುಳಾ ಪಾವಗಡ, ವಿಜಯಪುರದ ಮಕ್ಕಳ ಸಾಹಿತಿ ಪಂಡಿತ್ ಅವಜಿ, ಹಿರಿಯ ಸಾಹಿತಿ ಡಾ. ಸಿದ್ಧಣ್ಣ ಬಾಡಗಿ, ಧನಲಕ್ಷ್ಮೀ, ಶಿವರಾಜ ಅಂಡಗಿ, ಡಾ. ಡಿ. ಪೂಜಾರಿ ಹುಂಡೇಕಲ್, ಭಾಗ್ಯಶ್ರೀ ಬಾಬಣ್ಣ, ನಬಿ ರಸೂಲ್, ಧರ್ಮಣ್ಣ ಎಚ್. ಧನ್ನಿ, ಶರಣರಾಜ ಛಪ್ಪರಬಂದಿ, ಸಿದ್ದಪ್ಪ ತಳ್ಳಳ್ಳಿ ಹಾಗೂ ಸಿದ್ದು ಬಾನರ್ ಸೇರಿದಂತೆ ಹಲವು ಸಾಹಿತಿಗಳು ಮಾತನಾಡಿದರು.

ಇದೇ ಸಂದರ್ಭದಲ್ಲಿ ಲೇಖಕರಾದ ಧನಲಕ್ಷ್ಮೀ ಹಾಗೂ ಶರಣಗೌಡ ಪಾಟೀಲ ಅವರ ‘ಕಣಗಿಲೆ’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

Leave A Reply

Your email address will not be published.