ನಿಂಬರ್ಗಾ ವಲಯದ ಮಾಡ್ಯಾಳ ಕಾರ್ಯಕ್ಷೇತ್ರದ ಸಂಘಮೇಶ್ವರ ಜ್ಞಾನವಿಕಾಸ ಕೇಂದ್ರದಲ್ಲಿ ಬೀದಿ ನಾಟಕದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ ಹೂಗಾರ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಣುಕಾ ಮಾತನಾಡಿ, ಜ್ಞಾನವಿಕಾಸ ಕೇಂದ್ರಗಳ ಮೂಲಕ ಮಹಿಳೆಯರು ಹಾಗೂ ಗ್ರಾಮೀಣ ಸಮುದಾಯದಲ್ಲಿ ವಿವಿಧ ಸಾಮಾಜಿಕ ವಿಷಯಗಳ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಜನರು ಕಾರ್ಯಕ್ರಮಗಳಿಂದ ದೊರೆಯುವ ಮಾಹಿತಿಯನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಹೂಗಾರ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನರ ಹಾಗೂ ಗ್ರಾಮಗಳ ಅಭಿವೃದ್ಧಿಗಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಯೋಜನೆಯ ಸೌಲಭ್ಯಗಳು ಮತ್ತು ಕಾರ್ಯಕ್ರಮಗಳ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಲೋಹಿಯಾ ಕಲಾತಂಡದ ಕಲಾವಿದರು ಬೀದಿ ನಾಟಕದ ಮೂಲಕ ಹಲವು ಸಾಮಾಜಿಕ ಸಂದೇಶಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಿದರು. ಶೌಚಾಲಯ ನಿರ್ಮಾಣ ಮತ್ತು ಅದರ ಮಹತ್ವ, ಗ್ರಾಮ ಸ್ವಚ್ಛತೆ, ನೀರಿನ ಸಂರಕ್ಷಣೆ, ಶಿಕ್ಷಣದ ಅಗತ್ಯತೆ, ವರದಕ್ಷಿಣೆ ಪದ್ಧತಿ ತಡೆ, ಮೊಬೈಲ್ ಬಳಕೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳು ಹಾಗೂ ಮೂಢನಂಬಿಕೆಗಳ ನಿರ್ಮೂಲನೆ ಕುರಿತು ನಾಟಕ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಒಕ್ಕೂಟದ ಉಪಾಧ್ಯಕ್ಷ ಅಂಬುಭಾಯಿ ಮಾತನಾಡಿ, ಕಾರ್ಯಕ್ರಮದ ಮೂಲಕ ದೊರೆತ ಮಾಹಿತಿಯನ್ನು ಕೇವಲ ಕೇಳಿ ಮರೆಯದೆ, ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೂ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದರು.
Next Post