ಜೇವರ್ಗಿ: ಕುಡಿತದ ಚಟಕ್ಕೆ ಬಲಿಯಾದವರನ್ನು ಮದ್ಯವರ್ಜನ ಶಿಬಿರದ ಮೂಲಕ ಸರಿದಾರಿಗೆ ತರುವ ಕೆಲಸ ಮಾಡುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಶಾಯಿ ಹೇಳಿದರು.
ಪಟ್ಟಣದ ಧರ್ಮಸಿಂಗ್ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2107ನೇ ಮದ್ಯವರ್ಜನ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದುಶ್ಚಟಕ್ಕೆ ಬಲಿಯಾಗುವವರು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಬದುಕಿನ ದಿಕ್ಕನ್ನು ಬದಲಿಸಿಕೊಂಡು ಉತ್ತಮ ಜೀವನ ನಡೆಸಲು ಸಹಕಾರಿಯಾಗಿದೆ. ಮದ್ಯವರ್ಜನ ಶಿಬಿರಗಳು ಸಾಮಾನ್ಯವಾಗಿ ಮದ್ಯಪಾನ, ಮಾದಕ ವಸ್ತುಗಳು ಮತ್ತು ವ್ಯಸನಗಳಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ಆಯೋಜಿಸಲಾಗಿರುತ್ತದೆ. ಶಿಬಿರದಲ್ಲಿ ವೈದ್ಯಕೀಯ ಚಿಕಿತ್ಸೆ, ಕೌನ್ಸೆಲಿಂಗ್ ಮತ್ತು ಇತರ ಚಟುವಟಿಕೆಗಳ ಮೂಲಕ ವ್ಯಸನಗಳನ್ನು ನಿವಾರಿಸಲು ಸಹಾಯ ಮಾಡಲಾಗುತ್ತದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ನಂತರ ಮದ್ಯವರ್ಜನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಶೆಟ್ಟಪ್ಪಗೌಡ ಹಿರೇಗೌಡ ಮಾತನಾಡಿ, ದುಶ್ಚಟಗಳಿಂದ ಯುವ ಸಮೂಹ ದೂರವಿದ್ದಲ್ಲಿ ಜೀವನದಲ್ಲಿ ಏನಾದರೂ ಪ್ರಗತಿ ಸಾಧಿಸಲು ಸಾಧ್ಯ. ವ್ಯಸನ ಮುಕ್ತ ಸಮಾಜದ ನಿರ್ಮಾಣವೇ ಶಿಬಿರದ ಉದ್ದೇಶವಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಮದ್ಯವರ್ಜನ ಶಿಬಿರ ಇಂದು ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತಿದೆ. ಇಂತಹ ಶಿಬಿರಗಳಿಂದ ಲಕ್ಷಾಂತರ ಜನರನ್ನು ವ್ಯಸನ ಮುಕ್ತರನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಉಮೇಶ್ ಶರ್ಮಾ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಶಾಂತರಾಜ ಪಾಟೀಲ್, ಡಾ. ಪಿ.ಎಂ. ಮಠ, ಪುರಸಭೆ ಸದಸ್ಯೆ ಪ್ರೇಮಾ ವಿಜಯಕುಮಾರ, ಶಿವಶರಣಪ್ಪ ಪಡಶೆಟ್ಟಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಕುಲಕರ್ಣಿ ಹೊತ್ತಿನಮಡು, ಧರ್ಮಸ್ಥಳ ಸಂಸ್ಥೆಯ ಯಾದಗಿರಿ ನಿರ್ದೇಶಕ ವಸಂತಗೌಡ ಬಿ., ಜೇವರ್ಗಿ ತಾಲೂಕು ಯೋಜನಾಧಿಕಾರಿ ಮಾಲತೇಶ್ ಎಂ., ಯೋಜನಾಧಿಕಾರಿಗಳಾದ ರಾಜೇಶ್ ಕೆ., ರಮೇಶ್, ನಿರ್ಮಲಾ, ಶಾಮ್, ಬಸವರಾಜ, ಮಂಜುನಾಥ, ಈಶ್ವರ, ವಿರೇಶ್, ಮಲ್ಲಮ್ಮ, ಲಕ್ಷ್ಮಣ, ಹನುಮಂತ, ಸುಧಾ, ರಾಜೇಶ್ವರಿ ಸೇರಿದಂತೆ ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.