Shubhashaya News

ಕಲಬುರಗಿ| ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಖಂಡಿಸಿ ಪ್ರತಿಭಟನೆ

ಕಲಬುರಗಿ: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಗಂಗಾಜಲ ಸಿಂಪಡಿಸಿ ಶುದ್ಧೀಕರಿಸಿದ ಘಟನೆ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ವತಿಯಿಂದ ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಸಂಚಾಲಕ ಅರ್ಜುನ ಭದ್ರೆ, ಮಲ್ಲಿಕಾರ್ಜುನ ಖರ್ಗೆ ಅವರು ಆ.8ರಂದು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಸಭೆ ನಡೆಸಿದ ಸ್ಥಳವನ್ನು ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸದ ಮುಖಂಡರು ಗಂಗಾಜಲ ಸಿಂಪಡಿಸಿ ಶುದ್ಧೀಕರಿಸಿರುವುದು ಅಸ್ಪೃಶ್ಯತೆ ಆಚರಣೆಯ ಪ್ರತೀಕವಾಗಿದೆ ಎಂದು ಆರೋಪಿಸಿದರು.

ದೇಶದ ಹಿರಿಯ ರಾಜಕಾರಣಿ, ದಲಿತ ಸಮುದಾಯದ ಗೌರವದ ಪ್ರತೀಕವಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸುವ ಮೂಲಕ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ಇಂತಹ ಕೃತ್ಯವು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಅಸ್ಪೃಶ್ಯತೆ ನಿರ್ಮೂಲನೆಗಾಗಿ ನಡೆದ ಹೋರಾಟಗಳಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.

ಭಾರತೀಯ ಸಂವಿಧಾನದ ಅನುಚ್ಛೇದ 17 ಅಸ್ಪೃಶ್ಯತೆಯನ್ನು ನಿಷೇಧಿಸಿದೆ. ಅಸ್ಪೃಶ್ಯತೆ ಅಥವಾ ಜಾತಿ ಆಧಾರಿತ ತಾರತಮ್ಯವನ್ನು ಯಾವುದೇ ರೂಪದಲ್ಲೂ ಸಹಿಸಬಾರದು. ಇಂತಹ ಘಟನೆಗಳಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಸಂವಿಧಾನದ ಆಶಯಗಳನ್ನು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.

“ಒಬ್ಬ ಹಿರಿಯ ಹಾಗೂ ಪ್ರಬುದ್ಧ ರಾಜಕಾರಣಿಯನ್ನೇ ಅಸ್ಪೃಶ್ಯತೆಯ ಹೆಸರಿನಲ್ಲಿ ಅವಮಾನಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ದಲಿತರು ಎದುರಿಸುತ್ತಿರುವ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಜಾತಿ ಆಧಾರಿತ ತಾರತಮ್ಯ ಹಾಗೂ ಅಸ್ಪೃಶ್ಯತೆಯಂತಹ ಅನಿಷ್ಟ ಆಚರಣೆಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಅಗತ್ಯ” ಎಂದು ಭದ್ರೆ ಹೇಳಿದರು.

ಶುದ್ಧೀಕರಣದ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಘಟನೆಯ ಹೊಣೆಗಾರಿಕೆ ಹೊಂದಿರುವ ಸಂಘಟನೆಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅಸ್ಪೃಶ್ಯತೆ ಹಾಗೂ ಜಾತಿ ತಾರತಮ್ಯವನ್ನು ನಿರ್ಮೂಲನೆ ಮಾಡಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಸಮಾಜ ನಿರ್ಮಿಸುವುದು ಸಂವಿಧಾನದ ಆಶಯವಾಗಿದೆ. ಈ ಆಶಯಗಳಿಗೆ ಧಕ್ಕೆ ತರುವ ಯಾವುದೇ ಕೃತ್ಯಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಕ್ರಾಂತಿ, ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಖನ್ನಾ, ಮಹೇಶ್ ಕೋಕಿಲೆ, ಸಾಯಬಣ್ಣ ಕೊಟನೂರ, ಆರ್.ಕೆ. ಹುಡುಗಿ, ದತ್ತಾತ್ರೇಯ ಇಕ್ಕಲಕಿ, ಲಕ್ಷ್ಮಣ ದಸ್ತಿ, ಮಹಾಂತೇಶ ನವಕಲ, ಅಜೀಜ್ ಐಕೂರ, ಸಿದ್ದಣ್ಣ, ಸೂರ್ಯಕಾಂತ ಆಜಾದಪುರ, ರಾಜಕುಮಾರ್, ರಾಮಣ್ಣ ಸೇರಿದಂತೆ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave A Reply

Your email address will not be published.