ಯಡ್ರಾಮಿ: ಶಿಕ್ಷಕ ವೃತ್ತಿ ಮಾಡುವುದು ಭಾಗ್ಯವಂತರ ಕೆಲಸವಾಗಿದ್ದು ಸಮಾಜದಲ್ಲಿ ಸಾಮಾಜಿಕ ಬದಲಾವಣೆ ತರುವ ಶ್ರೇಷ್ಠ ಸೇವೆಯಾಗಿದೆ. ಶಿಕ್ಷಕ ಸಮುದಾಯವು ಸಮಾಜದ ಎಲ್ಲ ಕ್ಷೇತ್ರಗಳನ್ನು ಬೆಳೆಸುವ ಮಾಂತ್ರಿಕನಂತೆ ಎಂದು ಮಳ್ಳಿ ಹಿರೇಮಠದ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ನಾಗರಹಳ್ಳಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಮಲ್ಲಣ್ಣ ಸಜ್ಜನ್ ಅವರ ಅಭಿನಂದನಾ ಹಾಗೂ ನಿವೃತ್ತಿ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಶಿಕ್ಷಕ ವೃತ್ತಿ ಎಲ್ಲರಿಗೂ ದೊರೆಯುವ ಅವಕಾಶವಲ್ಲ. ಅದೃಷ್ಟ ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನದಿಂದ ಈ ಸೇವೆ ದೊರೆಯುತ್ತದೆ. ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ ಹೊಂದಿದ್ದು ಪ್ರತಿಕ್ಷಣವೂ ವಿದ್ಯಾರ್ಥಿಗಳಿಗೆ ಜ್ಞಾನ ನೀಡುವ ತಳಮಳ ಇಮ್ಮಡಿಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಲ್ಲಣ್ಣ ಸಜ್ಜನ್ ಸೇವೆಗೆ ಮೆಚ್ಚುಗೆ: ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ನಾಗರಹಳ್ಳಿಯ ಡಾ. ಸಿದ್ಧನಗೌಡ ಪಾಟೀಲ ಮಾತನಾಡಿ, ನಮ್ಮತನ ಯಾವತ್ತಿದ್ದರೂ ಅಳಿದು ಹೋಗದಂತೆ ವಿಶ್ವದ ಭೂಪಟದಲ್ಲಿ ನಾವು ಮಿಂಚಬೇಕು ಎಂಬ ಆಶಯದಂತೆ ಯಡ್ರಾಮಿ ತಾಲೂಕಿನ ಸಣ್ಣ ಹಳ್ಳಿಯಿಂದ ಬೆಳೆದು ಬಂದ ಮಲ್ಲಣ್ಣ ಸಜ್ಜನ್ ಅವರು ಸರ್ಕಾರಿ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಶ್ಲಾಘಿಸಿದರು.
ಮಲ್ಲಣ್ಣ ಸಜ್ಜನ್ ಅವರು ಸೌಮ್ಯ ಹಾಗೂ ಗಂಭೀರ ಸ್ವಭಾವದ ವ್ಯಕ್ತಿಯಾಗಿದ್ದು ಜೀವನದಲ್ಲಿ ಹಲವು ವ್ಯತಿರಿಕ್ತ ಸಂದರ್ಭಗಳನ್ನು ಎದುರಿಸಿ ಕಷ್ಟಗಳನ್ನು ಅನುಭವಿಸಿ ಮುನ್ನಡೆದಿದ್ದಾರೆ. ಕಷ್ಟಗಳನ್ನು ಎದುರಿಸಿ ಮುನ್ನಡೆಯುವವರಿಗೆ ಸಾಧಿಸುವ ಛಲ ಹೆಚ್ಚಿರುತ್ತದೆ. ಅದಕ್ಕೆ ಮಲ್ಲಣ್ಣ ಸಜ್ಜನ್ ಅವರ ಬದುಕು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.
ಈ ವೇಳೆ ಕುಳಗೇರಿ ಶ್ರೀ ವೇ.ಮೂ. ಗಂಗಾಧರಯ್ಯ ಹಿರೇಮಠ, ನಾಗರಹಳ್ಳಿ ಶ್ರೀ ವೇ.ಮೂ. ದಯಾನಂದ ಹಿರೇಮಠ ಹಾಗೂ ಶ್ರೀ ವೇ.ಮೂ. ಶ್ರೀಶೈಲ ಚಿಕ್ಕಮಠ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿಠೋಬ ಸಾಲೋಟಗಿ ವಹಿಸಿದ್ದರು. ನಾಗರಹಳ್ಳಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಾಹೇಬಗೌಡ ಬಿರಾದಾರ ಉಪಸ್ಥಿತರಿದ್ದರು. ನಿಂಗಣ್ಣ ರೂಗಿ ನಿರೂಪಿಸಿದರು.
ಸಮಾರಂಭದಲ್ಲಿ ಮಾಜಿ ಜಿ.ಪಂ. ಸದಸ್ಯ ದಂಡಪ್ಪಸಾಹು, ಮಾಜಿ ತಾ.ಪಂ. ಸದಸ್ಯ ಮಲ್ಲನಗೌಡ ಪಾಟೀಲ, ಶಿವಲಿಂಗಪ್ಪ, ಎಸ್.ಟಿ. ಬಿರಾದಾರ, ಹಣಮಂತಪ್ಪ ಕುಳಗೇರಿ, ಡಾ. ವಾಯ್.ಡಿ. ನಾಟಿಕಾರ, ದೇವಿಂದ್ರಪ್ಪ ಸೇರಿದಂತೆ ಶಿಕ್ಷಕರು, ಗಣ್ಯರು ಹಾಗೂ ಗ್ರಾಮಸ್ಥರು ಇದ್ದರು.