ಚಿತ್ತಾಪುರ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಬದುಕು, ಬರಹ ಹಾಗೂ ಸಾಹಿತ್ಯದ ಮೌಲ್ಯಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಚಿತ್ತಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನರಸಪ್ಪ ಚಿನ್ನಾಕಟ್ಟಿ ಹೇಳಿದರು.
ತಾಲ್ಲೂಕಿನ ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುಲಕುಂದಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ “ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಬದುಕು, ಬರಹ ಮತ್ತು ಸಾಹಿತ್ಯದ ಅರಿವು” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಶಿವರಾಮ ಕಾರಂತರು ಕನ್ನಡ ಸಾಹಿತ್ಯದ ಶ್ರೇಷ್ಠ ಚಿಂತಕರಾಗಿದ್ದು, ಸಾಹಿತ್ಯ, ವಿಜ್ಞಾನ, ಯಕ್ಷಗಾನ, ಪರಿಸರ ಸಂರಕ್ಷಣೆ ಹಾಗೂ ಸಮಾಜ ಸುಧಾರಣೆಯ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಮೂಕಜ್ಜಿಯ ಕನಸುಗಳು ಕಾದಂಬರಿಗೆ 1978ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ಚೋಮನ ದುಡಿ, ಮರಳಿ ಮಣ್ಣಿಗೆ, ಬೆಟ್ಟದ ಜೀವ ಸೇರಿದಂತೆ ಅನೇಕ ಕೃತಿಗಳ ಮೂಲಕ ಮಾನವೀಯ ಮೌಲ್ಯಗಳು, ವೈಜ್ಞಾನಿಕ ಮನೋಭಾವ ಹಾಗೂ ಮೂಢನಂಬಿಕೆ ವಿರೋಧಿ ಚಿಂತನೆಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ವಿವರಿಸಿದರು.
ಕುಲಕುಂದಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವನ್ನು ನಾಲವಾರ ವಲಯ ಕಸಾಪದ ಗೌರವ ಸಲಹೆಗಾರ ಶಿವಕುಮಾರ ಸುಣಗಾರ ತಾಯಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಜುನಾಥ ಎಸ್. ನಾಯ್ಕಲ್ ಮಾತನಾಡಿ, ಇಂದಿನ ಸಮಾಜದಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಮತ್ತು ಸಾಹಿತ್ಯಾಸಕ್ತಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕವನ ವಾಚನ, ಜನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಪ್ರಶಾಂತ ಕುಲಕರ್ಣಿ, ರಶ್ಮಿ ಕುಲಕರ್ಣಿ ಹಾಗೂ ಶಿವಲೀಲಾ ತುನ್ನೂರ ಅವರು ಕವನ ವಾಚನ ನಡೆಸಿದರೆ, ಶಂಕರ ಹಡಪದ ಗಾಯನ ಮತ್ತು ಮೌನೇಶ ಶಹಾಪೂರ ಅವರ ತಬಲಾ ವಾದನ ಕಾರ್ಯಕ್ರಮಕ್ಕೆ ಮೆರುಗು ತಂದಿತು.
ಈ ಸಂದರ್ಭದಲ್ಲಿ ಮಲ್ಲುಗೌಡ ಪಾಟೀಲ್, ಸಿದ್ದುಗೌಡ, ನಾಗು ಸಾಹುಕಾರ, ಮಲ್ಲೇಶ ಪೂಜಾರಿ, ಈರಣ್ಣ ಪೂಜಾರಿ, ಸಾಯಿಬಣ್ಣ ವನಬಾ, ಮಹಾದೇವ ಮಡಿವಾಳ, ಹಯ್ಯಾಳ ಪೂಜಾರಿ, ಮೌನೇಶ, ಈರಣ್ಣ ನೀಲೂರ, ಸತೀಶ್, ಎಸ್‌ಡಿಎಂಸಿ ಅಧ್ಯಕ್ಷ ವಿರೇಶ ಹಡಪದ, ರವಿ ಮಠದ, ಶ್ರೀಧರ ಪತ್ತಾರ, ದೇವರಾಜ ಪೂಜಾರಿ, ಶರಣು ಸಾಹು ಮದರಕಿ, ಉಮೇಶ ಯರಗೋಳ ಸೇರಿದಂತೆ ಗ್ರಾಮಸ್ಥರು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಬಿ. ಹಡಪದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣಕುಮಾರ ಸುಣಗಾರ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ತಳವಾರ ವಂದನಾರ್ಪಣೆ ಸಲ್ಲಿಸಿದರು.