ಚಿತ್ತಾಪುರ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ ಮಾಡಿರುವ ಘಟನೆ ತಾಲೂಕಿನ ಅಲ್ಲೂರ(ಬಿ) ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಅಲ್ಲೂರ(ಬಿ) ಗ್ರಾಮದಲ್ಲಿ ಶುಕ್ರವಾರ ನಸುಕಿನ ಜಾವ ಮನೆಯ ಮುಂದಿನ ಕಟ್ಟೆಯ ಮೇಲೆ ಭೀಮರಾಯ ಮಲ್ಲೆಶಪ್ಪ (22) ಎಂಬುವರು ಮಲಗಿದ್ದಾಗ ಸಿದ್ದಪ್ಪ ಮಲ್ಲಪ್ಪ ಎಂಬುವರು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿಯ ಗೆಳೆಯ ಸಿದ್ದಪ್ಪ ಮಲ್ಲಪ್ಪ ಎಂಬುವವನೆ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಲೆ ಡಿವೈಎಸ್‍ಪಿ ಉಮೇಶ ಚಿಕ್ಕಮಠ, ಸಿಪಿಐ ಕೃಷ್ಣಪ್ಪ ಕಲ್ಲದೇವರ, ಚಿತ್ತಾಪುರ ಪ್ರಭಾರಿ ಪಿಎಸ್‍ಐ ಸಿದ್ರಾಮಪ್ಪ ಬಳಿಚಕ್ರ, ವಾಡಿ ಕ್ರೈಂ ಪಿಎಸ್‍ಐ ಶ್ರೀಶೈಲ್ ಅಂಬಾಟಿ ಹಾಗೂ ಸಿಬ್ಬಂದಿ ಅಲ್ಲೂರ(ಬಿ) ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಲ್ಲೇಶಪ್ಪ ಹಣಮಂತ ನೀಡಿರುವ ದೂರಿನಡಿ ಘಟನೆ ಸಂಬಂಧಿಸಿದಂತೆ ಸಿದ್ದಪ್ಪ ಮಲ್ಲಪ್ಪ, ಸಾಬಣ್ಣ ಮಲ್ಲಪ್ಪ, ಶ್ರೀದೇವಿ ಮಲ್ಲಪ್ಪ, ಯಂಕಮ್ಮ ಸಾಬಣ್ಣ, ಶರಣಮ್ಮ ದುರ್ಗಣ್ಣ ಎಂಬುವವರ ವಿರುದ್ಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬಿಸಿದ್ದಾರೆ.
ಘಟನೆಯ ವಿವಿರ
ಕೊಲೆಯಾದ ಮೃತ ಭೀಮರಾಯ ಮಲ್ಲೇಶಪ್ಪ ಹಾಗೂ ಕೊಲೆ ಆರೋಪಿ ಸಿದ್ದಪ್ಪ ಮಲ್ಲಪ್ಪ ಆತ್ಮೀಯ ಸ್ನೇಹಿತರಾಗಿದ್ದರು. ಇಬ್ಬರು ಬೆಂಗಳೂರಲ್ಲಿದ್ದರು. ಕಳೆದ 15 ದಿನಗಳ ಹಿಂದೆ ಲಾಕ್‍ಡೌನ್ ಸಮಯದಲ್ಲಿ ಅಲ್ಲೂರ(ಬಿ) ಗ್ರಾಮಕ್ಕೆ ಬಂದಿದ್ದರು. ಯಾವದೊ ಕ್ಷುಲ್ಲಕ ಕಾರಣಕ್ಕೆ ಗುರುವಾರ ಮಧ್ಯಾಹ್ನ ಭೀಮರಾಯ ಹಾಗೂ ಸ್ನೇಹಿತ ಸಿದ್ದಪ್ಪ ಗ್ರಾಮದ ಕಟ್ಟೆಮ್ಮ ದೇವಿ ಕಟ್ಟೆಯ ಬಳಿ ಜಗಳವಾಡಿದ್ದಾರೆ. ಅದನ್ನೆ ಸಿದ್ದಪ್ಪ ಮನಸ್ಸಿನಲ್ಲಿಟ್ಟುಕೊಂಡು ಶುಕ್ರವಾರ ನಸುಕಿನ ಜಾವ ಭೀಮರಾಯ ಅವರ ಮನೆಗೆ ಹೋಗಿ ಮನೆಯ ಮುಂದಿನ ಕಟ್ಟೆಯ ಮೇಲೆ ಮಲಗಿದ್ದ ಭೀಮರಾಯನನ್ನು ಮಚ್ಚಿನಿಂದ ಕತ್ತಿನ ಭಾಗದಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಯ ಮಾಡುವ ಸಂದರ್ಭದಲ್ಲಿ ಕೊಲೆಯದ ಭೀಮರಾಯ ಅತ್ತಿಗೆ ನೋಡಿ ಕಿರುಚಿದಾಗ ಆರೋಪಿ ಓಡಿಹೋಗಿದ್ದಾನೆ.