ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಭಾನುವಾರ ಕಲಬುರಗಿ ನಗರದಲ್ಲಿ ಜರುಗಿದ ಪೊಲೀಸ್ ಕಾನ್‍ಸ್ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಸುಗಮವಾಗಿ ಹಾಗೂ ಶಾಂತಿಯುತವಾಗಿ ನೆರವೇರಿತು.
ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರು ಖುದ್ದಾಗಿ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರೀಕ್ಷೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅಭ್ಯರ್ಥಿಗಳಿಗೆ ಒದಗಿಸಿರುವ ಸೌಲಭ್ಯ, ಅಕ್ರಮ ತಡೆಗಟ್ಟಲು ಕೈಗೊಂಡ ಕ್ರಮಗಳ ಬಗ್ಗೆಯೂ ಪರಿಶೀಲನೆ ನಡೆಸಿದರು.
ಪೊಲೀಸ್ ಕಾನ್‍ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಗೆ ನಗರದಲ್ಲಿ 40 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಬೆಳಗಿನ ಅವಧಿಯ ಪರೀಕ್ಷೆಗೆ ನೋಂದಾಯಿಸಿದ 15,702 ಅಭ್ಯರ್ಥಿಗಳ ಪೈಕಿ 14,942 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರೆ 760 ಅಭ್ಯರ್ಥಿಗಳು ಗೈರಾಗಿದ್ದರು. ಅದೇ ರೀತಿ ಮಧ್ಯಾಹ್ನ ಅವಧಿಯ ಪರೀಕ್ಷೆಗೆ ನೋಂದಾಯಿಸಿದ 14,370 ಅಭ್ಯರ್ಥಿಗಳ ಪೈಕಿ 13,715 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 655 ಅಭ್ಯರ್ಥಿಗಳು ಗೈರಾಗಿದ್ದರು.
ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ ಟಿ.ವಿ, ಮೊಬೈಲ್ ಜಾಮರ್ ಅಳವಡಿಸಿದಲ್ಲದೆ ಅಕ್ರಮ ನಕಲು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಭದ್ರತೆ ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಪ್ರತಿ ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಯಾವುದೇ ಅಭ್ಯರ್ಥಿಯ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಪೊಲೀಸ್ ಸಿಬ್ಬಂದಿಗಳಿಂದ ಫ್ರಿಸ್ಕಿಂಗ್ ಜೊತೆಗೆ ಸ್ಮಾರ್ಟ್ ಡಿವೈಸ್ ಬಳಕೆ ತಡೆಗೆ ಇ.ಎನ್.ಟಿ ತಜ್ಞ ಸಿಬ್ಬಂದಿಗಳನ್ನು ನಿಯೋಜಿಸಿ ಅಭ್ಯರ್ಥಿಗಳನ್ನು ತಪಾಸಣೆಗೊಳಪಡಿಸಿಯೆ ಕೇಂದ್ರದೊಳಗೆ ಬಿಡಲಾಯಿತು.
ಒಟ್ಟಾರೆಯಾಗಿ ಕಲಬುರಗಿ ನಗರದಲ್ಲಿ ಭಾನುವಾರ ಜರುಗಿದ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ಜರುಗಿದೆ ಎಂದು ಡಿ.ಸಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.