Shubhashaya News

ನಿವೃತ್ತಿ ಜೀವನ ಸಾಧನೆಗೆ ಕೊನೆಯಲ್ಲ, ಸಾರ್ಥಕ ಬದುಕಿಗೆ ಹೊಸ ಅಧ್ಯಾಯ: ಶಿವರಾಜ ಅಂಡಗಿ

ಕಲಬುರಗಿ: ನಿವೃತ್ತಿ ಜೀವನವು ಸಾಧನೆಗೆ ಅಂತ್ಯವಲ್ಲ, ಬದಲಾಗಿ ಸಮಾಜಮುಖಿ ಹಾಗೂ ಸಾರ್ಥಕ ಬದುಕಿಗೆ ಹೊಸ ಅವಕಾಶವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು.

ನಗರದ ದೇವಿನಗರದಲ್ಲಿರುವ ಸಿದ್ದರೂಢ ಸತ್ಸಂಗ ಸಮಿತಿ ಹಾಗೂ ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನ (ರಿ) ಸಂಯುಕ್ತಾಶ್ರಯದಲ್ಲಿ ರವಿವಾರ ಆಯೋಜಿಸಿದ್ದ ಗುರುನಾಥ ಭೀಮಳ್ಳಿ ವಿರಚಿತ ‘ಅಂತರ್ಜ್ಯೋತಿ’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರ್ತವ್ಯದ ಜೊತೆಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಬದುಕನ್ನು ಅಳವಡಿಸಿಕೊಂಡು, ನಿವೃತ್ತಿಯ ನಂತರ ತಮ್ಮ ಜ್ಞಾನ ಮತ್ತು ಅನುಭವಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಗುರುನಾಥ ಭೀಮಳ್ಳಿ ಅವರು ಈ ಕೃತಿಯನ್ನು ರಚಿಸಿರುವುದು ಶ್ಲಾಘನೀಯವಾಗಿದೆ. ನಿವೃತ್ತಿಯ ನಂತರವೂ ಸತ್ಸಂಗ, ಸಮಾಜಸೇವೆ ಹಾಗೂ ಸಾಹಿತ್ಯದ ಮೂಲಕ ಸಕ್ರಿಯರಾಗಿರುವ ಅವರು ಇಂದಿನ ಹಿರಿಯ ನಾಗರಿಕರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಆಧ್ಯಾತ್ಮಿಕ ಚಿಂತಕರಾದ ಬಿ. ಮಹೇಶ್ವರಿಜೀ ಅವರು ಕೃತಿಯನ್ನು ಪರಿಚಯಿಸಿ, ‘ಅಂತರ್ಜ್ಯೋತಿ’ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳ ಅಮೂಲ್ಯ ಸಂಕಲನವಾಗಿದೆ. ಮಾನವ ಜೀವನವನ್ನು ಮೌಲ್ಯಯುತವಾಗಿ ರೂಪಿಸಿಕೊಳ್ಳಲು ಅಗತ್ಯವಾದ ವಿಚಾರಗಳನ್ನು ಸರಳ ಹಾಗೂ ಪರಿಣಾಮಕಾರಿ ಭಾಷೆಯಲ್ಲಿ ಲೇಖಕರು ನಿರೂಪಿಸಿದ್ದು, ಆಧ್ಯಾತ್ಮಿಕ ಆಸಕ್ತಿ ಹೊಂದಿರುವ ಪ್ರತಿಯೊಬ್ಬರೂ ಓದಲೇಬೇಕಾದ ಕೃತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಮೈಂದರ್ಗಿ ಹಿರೇಮಠದ ಶ್ರೀ ಷ.ಬ್ರ. ಅಭಿನವ ರೇವಣಸಿದ್ದ ಪಟ್ಟದೇವರು ಆಶೀರ್ವಚನ ನೀಡಿ, “ಸೇವೆ ಸ್ವರ್ಗದ ಸೋಪಾನ” ಎಂಬ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಗುರುನಾಥ ಭೀಮಳ್ಳಿ ಅವರು ಶಿಕ್ಷಣ ಸಹಾಯ, ಗ್ರಂಥಾಲಯಗಳ ಸ್ಥಾಪನೆ, ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯೊಂದಿಗೆ ಸತ್ಸಂಗದ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದು, ಅವರ ಈ ಕೃತಿ ಆಧ್ಯಾತ್ಮಿಕ ಸಾಧಕರಿಗೆ ದಾರಿದೀಪವಾಗಲಿದೆ ಎಂದು ಹೇಳಿದರು.

ಕೃತಿ ರಚನೆ ಕುರಿತು ಮಾತನಾಡಿದ ಲೇಖಕ ಗುರುನಾಥ ಭೀಮಳ್ಳಿ ಅವರು, ಶ್ರೀ ಸಿದ್ದಾರೂಢರ ಪ್ರೇರಣೆಯಿಂದ ನಡೆಸಿದ ಸತ್ಸಂಗಗಳ ಅನುಭವಗಳು ಮತ್ತು ಆಧ್ಯಾತ್ಮಿಕ ಚಿಂತನೆಗಳೇ ‘ಅಂತರ್ಜ್ಯೋತಿ’ ಕೃತಿಯ ರೂಪ ಪಡೆದಿವೆ ಎಂದರು. ಕೃತಿ ಪ್ರಕಟಣೆಗೆ ಸಹಕರಿಸಿದ ಶರತ್‌ಚಂದ್ರ ಪೊಲೀಸ್ ಪಾಟೀಲ, ಸಾಹಿತ್ಯ ಪರಿಷ್ಕರಣೆಗೆ ಸಹಕರಿಸಿದ ಡಾ. ಕಾವ್ಯಶ್ರೀ ಮಹಾಗಾಂವಕರ್, ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ಸತ್ಸಂಗದ ಗೆಳೆಯರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕೆಕೆಆರ್‌ಡಿಬಿ ಅಧೀನ ಕಾರ್ಯದರ್ಶಿ ಶಿವಪುತ್ರಪ್ಪ ಕಂಠಿ, ಶ್ರವಣಕುಮಾರ ಮುನ್ನೊಳ್ಳಿ ಸೇರಿದಂತೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರ್ಮಲಾ ಸಿರಗಾಪೂರ ಸ್ವಾಗತಿಸಿದರು. ಕಾಶೀನಾಥ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ವಿನೋದಕುಮಾರ ಜನೇವರಿ ವಂದಿಸಿದರು.

ಕಾರ್ಯಕ್ರಮದಲ್ಲಿ ರೇವಣಸಿದ್ದಪ್ಪ ಜೀವಣಗಿ, ಗಣೇಶ ಚಿನ್ನಾಕರ್, ನಾಗೇಂದ್ರಪ್ಪ ಬಂಟನಳ್ಳಿ, ಸಂಗಪ್ಪ ಭೀಮಳ್ಳಿ, ಗುರುನಾಥ ವಿಠ್ಠಪ್ಪ, ಶರಣಬಸಪ್ಪ ಭೀಮಳ್ಳಿ, ಮಲ್ಲಿಕಾರ್ಜುನ ಆಳಂದ, ಚಂದ್ರಶೇಖರ ಭೀಮಳ್ಳಿ, ಚಂದ್ರಮೋಹನ ಭೀಮಳ್ಳಿ, ವಿಜಯಕುಮಾರ ಭಾಲ್ಕಿ, ಶಿವಶರಣ ಭೀಮಳ್ಳಿ, ಶ್ರೀಮತಿ ಮಲ್ಲಮ್ಮ, ಶ್ರೀಮತಿ ರೇಣುಕಾದೇವಿ ಸೇರಿದಂತೆ ಸಿದ್ದರೂಢ ಸತ್ಸಂಗ ಸಮಿತಿಯ ಸದಸ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.

Leave A Reply

Your email address will not be published.