ಯಡ್ರಾಮಿ: ತಾಲೂಕಿನ ವಸ್ತಾರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣವಾಗಿದ್ದರೂ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿತ್ಯ ಪರದಾಡುವಂತಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಶಾಲೆಯತ್ತ ಸಾಗುವ ದಾರಿ ಸಂಪೂರ್ಣ ಕೆಸರಿನಿಂದ ಆವೃತವಾಗಿದ್ದು ವಿದ್ಯಾರ್ಥಿಗಳು ಕೆಸರಿನಲ್ಲೇ ನಡೆದು ಶಾಲೆಗೆ ತೆರಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಆರ್‌ಎಂಎಸ್‌ಎ (RMSA) ಯೋಜನೆಯಡಿ ವಸ್ತಾರಿ ಗ್ರಾಮದ ಹೊರವಲಯದಲ್ಲಿ 1ರಿಂದ 10ನೇ ತರಗತಿವರೆಗೆ ಶಿಕ್ಷಣ ನೀಡುವ ಉದ್ದೇಶದಿಂದ ನೂತನ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದ 9 ಮತ್ತು 10ನೇ ತರಗತಿಗಳು ಆರಂಭಗೊಂಡಿದ್ದು ಸುಮಾರು 43ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮುಂದಿನ ತಿಂಗಳಿಂದ 1ರಿಂದ 8ನೇ ತರಗತಿಗಳೂ ಆರಂಭವಾಗಲಿದ್ದು ಒಟ್ಟು ಸುಮಾರು 280 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲಿದ್ದಾರೆ.
ಆದರೆ ಶಾಲೆಗೆ ಸಮರ್ಪಕ ರಸ್ತೆ ನಿರ್ಮಿಸದ ಕಾರಣ ಮಳೆ ಬಂದಾಗ ರಸ್ತೆ ಸಂಪೂರ್ಣ ಕೆಸರಿನಿಂದ ತುಂಬಿ ನೀರು ನಿಲ್ಲುತ್ತದೆ. ಪರಿಣಾಮ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಗೆ ತಲುಪಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಚಪ್ಪಲಿಗಳನ್ನು ಕೈಯಲ್ಲಿ ಹಿಡಿದು ಬರಿಗಾಲಿನಲ್ಲಿ ಕೆಸರಿನಲ್ಲಿ ನಡೆದು ಶಾಲೆಗೆ ಬರುತ್ತಿರುವ ದೃಶ್ಯ ಪ್ರತಿದಿನ ಕಂಡುಬರುತ್ತಿದೆ.
ಈ ಕುರಿತು ಶಾಲೆಯ ಶಿಕ್ಷಕರು ಮಾತನಾಡಿ, ಮಳೆ ಬಂದರೆ ಶಾಲೆಯ ರಸ್ತೆಯು ಸಂಪೂರ್ಣ ಕೆಸರಿನಿಂದ ಕೂಡಿರುತ್ತದೆ. ನೀರು ತುಂಬಿಕೊಳ್ಳುವುದರಿಂದ ಮಕ್ಕಳು ಶಾಲೆಗೆ ಬರಲು ತುಂಬಾ ಕಷ್ಟಪಡುತ್ತಾರೆ. ನಮಗೂ ಇದೇ ಪರಿಸ್ಥಿತಿ ಎದುರಾಗುತ್ತದೆ. ಕೆಲವೊಮ್ಮೆ ಕೆಸರಿನಲ್ಲಿ ಜಾರಿ ಬೀಳುವ ಅಪಾಯವೂ ಇದೆ. ಸಮಯಕ್ಕೆ ಶಾಲೆಗೆ ತಲುಪುವುದೇ ಸವಾಲಾಗುತ್ತದೆ ಎಂದು ಅಳಲು ತೋಡಿಕೊಂಡರು.
ರಸ್ತೆ ಸಮಸ್ಯೆಯಿಂದ ಮಳೆಗಾಲ ಪ್ರಾರಂಭವಾಗಿದ್ದು ಕೆಲ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದು ಅವರ ವಿದ್ಯಾಭ್ಯಾಸದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಲ್ಲೂ ಆತಂಕ ಹೆಚ್ಚಾಗಿದೆ.
ಶಾಲೆಗೆ ರಸ್ತೆ ನಿರ್ಮಿಸುವಂತೆ ಶಿಕ್ಷಕರು ಹಾಗೂ ಗ್ರಾಮಸ್ಥರು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಕೋಟ್ಯಂತರ ವೆಚ್ಚದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣವಾದರೂ, ಮೂಲಭೂತ ಸೌಲಭ್ಯವಾದ ರಸ್ತೆ ಕಲ್ಪಿಸದಿರುವುದು ವಿಪರ್ಯಾಸವಾಗಿದೆ. ಶಾಲೆಗೆ ಶೀಘ್ರದಲ್ಲಿ ಡಾಂಬರು ಅಥವಾ ಸಿಸಿ ರಸ್ತೆ ನಿರ್ಮಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸುರಕ್ಷಿತವಾಗಿ ಸಂಚರಿಸಲು ಅನುಕೂಲ ಕಲ್ಪಿಸಬೇಕು. ಶಿಕ್ಷಣಕ್ಕೆ ಅಗತ್ಯವಾದ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಈಗಾಗಲೇ ಗ್ರಾಮ ಪಂಚಾಯಿತಿ ಕಾರ್ಯಾಲಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶಿಕ್ಷಣದ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಶಾಲೆಗೆ ಡಾಂಬರು ಅಥವಾ ಸಿಮೆಂಟ್ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.
ಶಂಕರಗೌಡ, ಪ್ರಭಾರಿ ಮುಖ್ಯಗುರುಗಳು, ಸರ್ಕಾರಿ ಪ್ರೌಢ ಶಾಲೆ, ವಸ್ತಾರಿ