Shubhashaya News

ಹತಗುಂದಾದಲ್ಲಿ ‘ನಾದ ನಿರಂಜನ’ ಸಂಗೀತ ರಸಸಂಜೆ

ಆಳಂದ: ಹತಗುಂದಾ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬಸವನ ಸಂಗೋಳಗಿ ಶ್ರೀ ಬಸವೇಶ್ವರ ಜಾನಪದ ಕಲಾ ಸಂಘ ಆಯೋಜಿಸಿದ್ದ ‘ನಾದ ನಿರಂಜನ’ ಸಾಂಸ್ಕೃತಿಕ ಸಂಗೀತ ರಸಸಂಜೆಯನ್ನು ಶಾಂತಯ್ಯ ಹಿರೇಮಠ ಉದ್ಘಾಟಿಸಿದರು.

ಭಕ್ತಿ, ಜನಪದ ಮತ್ತು ಸುಗಮ ಸಂಗೀತದ ಸುಮಧುರ ಸಂಗಮಕ್ಕೆ ಮನಸೋತ ರಸಿಕರು
ಜನಪದ ಸಂಸ್ಕೃತಿ ಉಳಿವಿಗೆ ಸಂಘ-ಸAಸ್ಥೆಗಳ ಸೇವೆ ಶ್ಲಾಘನೀಯ: ಶಾಂತಯ್ಯ ಹಿರೇಮಠ
ಆಳಂದ: ಭಕ್ತಿಯ ಭಾವ, ಜನಪದದ ಸೊಗಡು ಹಾಗೂ ಸುಗಮ ಸಂಗೀತದ ಮಾಧುರ್ಯ ಒಂದೇ ವೇದಿಕೆಯಲ್ಲಿ ಅನಾವರಣಗೊಂಡ ಹತಗುಂದಾ ಗ್ರಾಮದ ‘ನಾದ ನಿರಂಜನ’ ಸಾಂಸ್ಕೃತಿಕ ಸಂಗೀತ ರಸಸಂಜೆ ಸಂಗೀತಾಸಕ್ತರಿಗೆ ಅಪೂರ್ವ ಅನುಭವವನ್ನು ನೀಡಿತು. ಕಲಾವಿದರ ಮನಮೋಹಕ ಗಾಯನಕ್ಕೆ ರಸಿಕರು ಕರತಾಡನದ ಸುರಿಮಳೆಯನ್ನೇ ಹರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ನೆರೆಯ ಹತಗುಂದಾ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಬಸವನ ಸಂಗೋಳಗಿ ಶ್ರೀ ಬಸವೇಶ್ವರ ಜಾನಪದ ಕಲಾ ಸಂಘ (ರಿ) ಆಶ್ರಯದಲ್ಲಿ ಆಯೋಜಿಸಿದ್ದ ಈ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಂತಯ್ಯ ಹಿರೇಮಠ, ತಾಂತ್ರಿಕ ಯುಗದ ಪ್ರಭಾವದ ನಡುವೆಯೂ ಸಾಹಿತ್ಯ, ಸಂಗೀತ ಹಾಗೂ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಂಘ-ಸAಸ್ಥೆಗಳು ಮತ್ತು ಸರ್ಕಾರ ನಡೆಸುತ್ತಿರುವ ಪ್ರಯತ್ನಗಳು ಶ್ಲಾಘನೀಯವಾಗಿವೆ ಎಂದು ಹೇಳಿದರು.
ಜನಪದ ಕಲೆ, ಭಕ್ತಿಗೀತೆ ಮತ್ತು ಸುಗಮ ಸಂಗೀತವು ನಮ್ಮ ಸಂಸ್ಕೃತಿಯ ಜೀವನಾಡಿಯಾಗಿದ್ದು, ಇವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುವುದರ ಜೊತೆಗೆ ಸಮಾಜದಲ್ಲಿ ಸಾಂಸ್ಕೃತಿಕ ಜಾಗೃತಿ, ಸೌಹಾರ್ದತೆ ಮತ್ತು ಮೌಲ್ಯಗಳ ಬೆಳವಣಿಗೆಗೆ ಪೂರಕವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಯ್ಯಸ್ವಾಮಿ ಸುಂಟನೂರ ವಹಿಸಿದ್ದರು. ವೇದಿಕೆಯಲ್ಲಿ ಅರುಣಕುಮಾರ ಓಗೆ, ಪ್ರಭುಲಿಂಗ ಬಿರೆದಾರ, ನಾಗೇಂದ್ರಪ್ಪ ಅಲ್ದಕ್, ವೀರಣ್ಣ ಕಂಬಾರ, ರವಿ ಅಲ್ದಕ್ ಹಾಗೂ ದೇವಿಂದ್ರ ಅಲ್ದಕ್ ಉಪಸ್ಥಿತರಿದ್ದರು.
ಸಂಗೀತ ರಸಸಂಜೆಯಲ್ಲಿ ಸೂರ್ಯಕಾಂತ ಶಾಸ್ತಿç, ರಾಜೇಂದ್ರ ವಿಶ್ವಕರ್ಮ, ಮಡಿವಾಳಪ್ಪ ನಂದೂರ, ಶರಣಯ್ಯ ಮಠಪತಿ, ಶರಣು ಸಾಗನೂರ, ಅಡವಯ್ಯ ಹಿರೇಮಠ, ಗುರಲಿಂಗಯ್ಯಸ್ವಾಮಿ ಹಿತ್ತಲಶಿರೂರ, ರವಿಸ್ವಾಮಿ ಗೋಟೂರ ಹಾಗೂ ಶರಣಪ್ಪ ಬಿಲಗುಂದಿ ಅವರು ಭಕ್ತಿಗೀತೆ, ಜನಪದ ಗೀತೆ ಮತ್ತು ಸುಗಮ ಸಂಗೀತದ ಸುಮಧುರ ಗಾಯನದ ಮೂಲಕ ಸಭಿಕರನ್ನು ಸಂಗೀತ ಲೋಕಕ್ಕೆ ಕರೆದೊಯ್ದರು. ಒಂದಕ್ಕಿAತ ಒಂದು ಮಧುರವಾದ ಗೀತೆಗಳು ದೇವಸ್ಥಾನದ ಆವರಣದಲ್ಲಿ ಮೊಳಗುತ್ತಿದ್ದಂತೆ ರಸಿಕರು ಭಾವಪರವಶರಾಗಿ ಕಲಾವಿದರನ್ನು ನಿರಂತರ ಕರತಾಡನದ ಮೂಲಕ ಪ್ರೋತ್ಸಾಹಿಸಿದರು.
ಕಾರ್ಯಕ್ರಮವನ್ನು ರೇವಣಯ್ಯಸ್ವಾಮಿ ನಿರೂಪಿಸಿದರು. ಸಂಘದ ಅಧ್ಯಕ್ಷ ಗುರುಪಾದಯ್ಯ ಮಠ ಸ್ವಾಗತಿಸಿ ವಂದಿಸಿದರು. ಗ್ರಾಮಸ್ಥರು, ಕಲಾಭಿಮಾನಿಗಳು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಸಂಗೀತಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ‘ನಾದ ನಿರಂಜನ’ ಸಂಗೀತ ರಸಸಂಜೆಯನ್ನು ಯಶಸ್ವಿಗೊಳಿಸಿದರು.

Leave A Reply

Your email address will not be published.