ಆಳಂದ:ಸಿಯುಕೆಯಲ್ಲಿ ನಡೆದ ವಸತಿ ನಿಲಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ ಉದ್ಘಾಟಿಸಿದರು.
ಆಳಂದ: ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ, ಸುರಕ್ಷತೆ ಹಾಗೂ ಯೋಗಕ್ಷೇಮವನ್ನು ಖಾತ್ರಿಪಡಿಸುವಲ್ಲಿ ಹಾಸ್ಟೆಲ್ ಕೇರ್ಟೇಕರ್ಗಳ (ವಸತಿಗೃಹ ಉಸ್ತುವಾರಿಗಳ) ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಹಾಗೂ ಕಾನೂನು ವಿಭಾಗದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ವತಿಯಿಂದ “ಹಾಸ್ಟೆಲ್ ಕೇರ್ ಟೇಕರ್ಗಳಿಗೆ – ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ: ಜಾಗೃತಿ, ಗುರುತಿಸುವಿಕೆ ಮತ್ತು ಪ್ರತಿಕ್ರಿಯೆ” ವಿಷಯದ ಕುರಿತು ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.
ಸಿಯುಕೆಯಲ್ಲಿ ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದು, ವಿಭಿನ್ನ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಹಾಗೂ ಸಾಮಾಜಿಕ ಹಿನ್ನೆಲೆಯ ವಿದ್ಯಾರ್ಥಿಗಳು ಒಂದೇ ಕ್ಯಾಂಪಸ್ನಲ್ಲಿ ವಾಸಿಸುತ್ತಿದ್ದಾರೆ. ಇಂತಹ ಬಹುಸಾಂಸ್ಕೃತಿಕ ವಾತಾವರಣದಲ್ಲಿ ಹಾಸ್ಟೆಲ್ ಉಸ್ತುವಾರಿಗಳು ಕೇವಲ ಆಡಳಿತಾತ್ಮಕ ಜವಾಬ್ದಾರಿಗಳಿಗೆ ಸೀಮಿತರಾಗದೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು, ಸಲಹೆಗಾರರು ಹಾಗೂ ಪೋಷಕರಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಹಾಸ್ಟೆಲ್ ಕೇರ್ಟೇಕರ್ಗಳ ಸಮರ್ಪಣೆ, ಸೂಕ್ಷ್ಮತೆ ಹಾಗೂ ಸಮಯೋಚಿತ ಬೆಂಬಲದಿAದ ವಿದ್ಯಾರ್ಥಿ ಸ್ನೇಹಿ, ಸಮಾನತೆ ಆಧಾರಿತ ಹಾಗೂ ಆರೋಗ್ಯಕರ ವಸತಿ ವಾತಾವರಣ ನಿರ್ಮಾಣ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳೊಂದಿಗೆ ಸದಾ ಸಹಾನುಭೂತಿ ಮತ್ತು ಗೌರವದಿಂದ ವರ್ತಿಸುವುದರ ಜೊತೆಗೆ, ಅವರಿಗೆ ಸುಲಭವಾಗಿ ಲಭ್ಯವಿರುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ವಿಶೇಷವಾಗಿ ತರಗತಿ ವೇಳೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಪರಿಶೀಲಿಸುವುದು, ರಾತ್ರಿ ವೇಳೆಯಲ್ಲಿ ವಸತಿ ನಿಲಯಗಳಲ್ಲಿ ಅವರ ಸುರಕ್ಷತೆ ಹಾಗೂ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳುವುದು, ದೈಹಿಕ ಅಥವಾ ಮಾನಸಿಕ ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣಗಳನ್ನು ಎಚ್ಚರಿಕೆಯಿಂದ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವುದು ಹಾಸ್ಟೆಲ್ ಉಸ್ತುವಾರಿಗಳ ಪ್ರಮುಖ ಕರ್ತವ್ಯವಾಗಿದೆ ಎಂದು ಪ್ರೊ. ಕುಬಕಡ್ಡಿ ತಿಳಿಸಿದರು.
ವಸತಿ ನಿಲಯಗಳಲ್ಲಿ ಆಹಾರದ ಗುಣಮಟ್ಟ ಮತ್ತು ಪ್ರಮಾಣ, ಶುಚಿತ್ವ, ನೈರ್ಮಲ್ಯ, ಭದ್ರತೆ, ಆರೋಗ್ಯ ಸೇವೆಗಳು ಸೇರಿದಂತೆ ಅಗತ್ಯ ಮೂಲಸೌಲಭ್ಯಗಳ ಬಗ್ಗೆ ನಿರಂತರ ನಿಗಾ ವಹಿಸಿ, ಯಾವುದೇ ಸಮಸ್ಯೆ ಕಂಡುಬAದ ಕೂಡಲೇ ಪರಿಹರಿಸಬೇಕು. ತಮ್ಮ ವ್ಯಾಪ್ತಿಗೆ ಮೀರಿದ ಸಮಸ್ಯೆಗಳಿದ್ದರೆ ವಿಳಂಬವಿಲ್ಲದೆ ಸಂಬAಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅವರು ಸೂಚಿಸಿದರು.
ಕಾರ್ಯಾಗಾರದಲ್ಲಿ ಸಿಯುಕೆಯ ಸಲಹೆಗಾರರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಉತ್ತರ ಯು.ವಿ. ಮತ್ತು ಶ್ರೀ ಸಂದೇಶ್ ಜೆ.ಆರ್. ಅವರು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣಗಳನ್ನು ಗುರುತಿಸುವ ವಿಧಾನ, ವಿದ್ಯಾರ್ಥಿಗಳೊಂದಿಗೆ ಪರಿಣಾಮಕಾರಿ ಸಂವಹನ ನಡೆಸುವ ಕೌಶಲ್ಯ, ಸಂಕಷ್ಟದ ಸಂದರ್ಭಗಳನ್ನು ಸಹಾನುಭೂತಿಯಿಂದ ನಿರ್ವಹಿಸುವುದು ಹಾಗೂ ಅಗತ್ಯವಿದ್ದಾಗ ಸೂಕ್ತ ಮಾರ್ಗದರ್ಶನ ಮತ್ತು ನೆರವು ಒದಗಿಸುವ ಕುರಿತು ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಹಾಯಕ ಡೀನ್ ಡಾ. ಮಲ್ಲಿಕಾರ್ಜುನ್ ಹೂಗಾರ್, ಮುಖ್ಯ ಹಾಸ್ಟೆಲ್ ವಾರ್ಡನ್ ಡಾ. ಬಸವರಾಜ ಸೋಮನಮರಡಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಕಲ್ಯಾಣ ಡೀನ್ ಕಚೇರಿಯ ಸಿಬ್ಬಂದಿ ಶ್ರೀ ಚರಣ್ ಕಾರ್ಯಕ್ರಮವನ್ನು ಸ್ವಾಗತಿಸಿದರು. ಶ್ರೀ ಅರುಣ್ಕುಮಾರ್ ವಂದಿಸಿದರು.
ವಿಶ್ವವಿದ್ಯಾಲಯದ ೭ ವಿದ್ಯಾರ್ಥಿ ವಸತಿ ನಿಲಯಗಳು ಹಾಗೂ ೫ ವಿದ್ಯಾರ್ಥಿನಿಯರ ವಸತಿ ನಿಲಯಗಳ ಹಾಸ್ಟೆಲ್ ಮೇಲ್ವಿಚಾರಕರು ಕಾರ್ಯಾಗಾರದಲ್ಲಿ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು.