Shubhashaya News

ಭಾಷೆಯೇ ಸಮಾಜ ಮತ್ತು ರಾಷ್ಟ್ರ ನಿರ್ಮಾಣದ ಶಕ್ತಿ: ಪ್ರೊ. ಬಟ್ಟು ಸತ್ಯನಾರಾಯಣ

ಜ್ಞಾನಪೀಠ ಪುರಸ್ಕೃತರ ಕೊಡುಗೆ ಸಿಯುಕೆ–ಸಾಹಿತ್ಯ ಅಕಾಡೆಮಿ ವಿಚಾರ ಸಂಕಿರಣ

ಆಳಂದ: ಸಿಯುಕೆ ಮತ್ತು ನವದೆಹಲಿಯ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ “ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಕುಲಪತಿ ಪ್ರೊ. ಬಟ್ಟು ಸಸತ್ಯನಾರಾಯಣ ಅವರು ಮಾತನಾಡಿದರು.

ಆಳಂದ: ಭಾಷೆಯು ಕೇವಲ ಸಂವಹನದ ಮಾಧ್ಯಮವಲ್ಲ, ಅದು ಸಮಾಜದ ರೂಪುಗೊಳಿಸುವಿಕೆ, ಜ್ಞಾನ ಪ್ರಸಾರ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಆಧಾರಸ್ತಂಭವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಭಿಪ್ರಾಯಪಟ್ಟರು. ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ), ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗ ಹಾಗೂ ನವದೆಹಲಿಯ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಆಯೋಜಿಸಿದ್ದ “ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮತ್ತು ಭಾರತೀಯ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಗಳು” ವಿಷಯದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಜಾಗತೀಕರಣದ ಯುಗದಲ್ಲಿ ಬಹುಭಾಷಾ ಶಿಕ್ಷಣದ ಮಹತ್ವ ಹೆಚ್ಚುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ–೨೦೨೦ರ ಅಡಿಯಲ್ಲಿ ತ್ರಿಭಾಷಾ ಸೂತ್ರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು. ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಪಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಆಳವಾದ ಅರಿವು ಮೂಡುತ್ತದೆ. ಜೊತೆಗೆ ಇತರೆ ಭಾಷೆಗಳ ಅಧ್ಯಯನಕ್ಕೂ ಅದು ಭದ್ರ ಬುನಾದಿಯಾಗಿದ್ದು, ಉನ್ನತ ಶಿಕ್ಷಣ ಹಾಗೂ ಭವಿಷ್ಯದ ಸಾಧನೆಗಳಿಗೆ ದಾರಿಯಾಗುತ್ತದೆ ಎಂದು ತಿಳಿಸಿದರು.
ಸ್ಥಳೀಯ ಭಾಷೆಯ ಮೇಲಿನ ಹಿಡಿತವು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಅಸ್ಮಿತೆಯನ್ನು ಗಟ್ಟಿಗೊಳಿಸುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಲು ಸಹಕಾರಿಯಾಗುತ್ತದೆ. ವಿಶ್ವದ ಅನೇಕ ರಾಷ್ಟ್ರಗಳು ಮಕ್ಕಳಿಗೆ ಮೊದಲು ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಿ, ನಂತರ ಇತರೆ ಭಾಷೆಗಳ ಕಲಿಕೆಗೆ ಅವಕಾಶ ಕಲ್ಪಿಸುವ ಮಾದರಿಯನ್ನು ಯಶಸ್ವಿಯಾಗಿ ಅನುಸರಿಸುತ್ತಿವೆ ಎಂದು ಅವರು ಹೇಳಿದರು.
ಕರ್ನಾಟಕದ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ತಮ್ಮ ಅದ್ವಿತೀಯ ಸಾಹಿತ್ಯ ಸೃಷ್ಟಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವುದಷ್ಟೇ ಅಲ್ಲದೆ, ಭಾರತೀಯ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿ ಕನ್ನಡದ ಕೀರ್ತಿಯನ್ನು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ ಎಂದು ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ವಿಚಾರ ಸಂಕಿರಣದ ಮುಖ್ಯ ಭಾಷಣ ಮಾಡಿದ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿಯ ಸಂಚಾಲಕ ಪ್ರೊ. ಬಸವರಾಜ ಕಲ್ಗುಡಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಆಯೋಜಿಸಿರುವ ಈ ಕಾರ್ಯಕ್ರಮ ಐತಿಹಾಸಿಕ ಮಹತ್ವ ಹೊಂದಿದ್ದು, ಕನ್ನಡ ಸಾಹಿತ್ಯದ ಅಪೂರ್ವ ಸಾಧಕರ ಕೊಡುಗೆಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವ ಮಹತ್ವದ ಪ್ರಯತ್ನವಾಗಿದೆ ಎಂದು ಹೇಳಿದರು.
ಜ್ಞಾನಪೀಠ ಪುರಸ್ಕೃತರ ಕೃತಿಗಳಲ್ಲಿರುವ ತಾತ್ವಿಕ ಚಿಂತನೆ, ಸಾಮಾಜಿಕ ಬದ್ಧತೆ, ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಭಾರತೀಯ ಸಾಹಿತ್ಯಕ್ಕೆ ಅವರು ನೀಡಿರುವ ಅಮೂಲ್ಯ ಕೊಡುಗೆಗಳನ್ನು ವಿದ್ಯಾರ್ಥಿಗಳು ಮತ್ತು ಸಂಶೋಧಕರು ಆಳವಾಗಿ ಅಧ್ಯಯನ ಮಾಡಲು ಈ ವಿಚಾರ ಸಂಕಿರಣ ಪರಿಣಾಮಕಾರಿ ವೇದಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ಕನ್ನಡ ಸಾಹಿತ್ಯ ಪರಂಪರೆ ಹಾಗೂ ಅದರ ರಾಷ್ಟ್ರೀಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತವೆ ಎಂದರು.
ಸಾಹಿತ್ಯ ಅಕಾಡೆಮಿಯ ಬೆಂಗಳೂರು ಪ್ರಾದೇಶಿಕ ಕಾರ್ಯದರ್ಶಿ ಶ್ರೀ ಷಣ್ಮುಖಾನಂದ ಸ್ವಾಗತಿಸಿದರು. ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿ ಸದಸ್ಯ ಶ್ರೀ ವಿಜಯಕುಮಾರ ಕಟಗಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷೀಯ ಭಾಷಣವನ್ನು ಸಿಯುಕೆ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ದೋಣೂರ ನೆರವೇರಿಸಿದರು.
ಪ್ರೊ. ವಿಕ್ರಮ್ ವಿಶಾಜಿ ಹಾಗೂ ಸಾಹಿತ್ಯ ಅಕಾಡೆಮಿಯ ಸಾಮಾನ್ಯ ಮಂಡಳಿ ಸದಸ್ಯ ಡಾ. ಮನು ಬಳಿಗಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ವಿಚಾರ ಸಂಕಿರಣದ ಅಂಗವಾಗಿ ಮೂರು ಶೈಕ್ಷಣಿಕ ಅಧಿವೇಶನಗಳು ನಡೆದವು. ಮೊದಲ ಅಧಿವೇಶನದಲ್ಲಿ ರಾಷ್ಟ್ರಕವಿ ಕುವೆಂಪು ಕುರಿತು ಡಾ. ಪ್ರಕಾಶ ಬಾಳಿಕಾಯಿ, ದ.ರಾ. ಬೇಂದ್ರೆ ಕುರಿತು ಡಾ. ನಾಗರತ್ನ ಪರಾಂಡೆ ಹಾಗೂ ಡಾ. ಕೆ. ಶಿವರಾಮ ಕಾರಂತ ಕುರಿತು ಡಾ. ವಿಜಯಕುಮಾರ ಎಂ. ಬೋರಟ್ಟಿ ಅವರು ಪ್ರಬಂಧ ಮಂಡಿಸಿದರು.
ಎರಡನೇ ಅಧಿವೇಶನದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕುರಿತು ಡಾ. ಮಹೇಂದ್ರ ಎಂ., ವಿ.ಕೃ. ಗೋಕಾಕ್ ಕುರಿತು ಡಾ. ತಾರಕೇಶ್ವರ ವಿ.ಬಿ. ಹಾಗೂ ಯು.ಆರ್. ಅನಂತಮೂರ್ತಿ ಕುರಿತು ಡಾ. ಎನ್.ಎಸ್. ಗುಂಡೂರು ಅವರು ತಮ್ಮ ವಿಚಾರಗಳನ್ನು ಮಂಡಿಸಿದರು.
ಮೂರನೇ ಅಧಿವೇಶನದಲ್ಲಿ ಗಿರೀಶ್ ಕಾರ್ನಾಡ್ ಕುರಿತು ಡಾ. ಸಿ. ನಾಗಣ್ಣ ಹಾಗೂ ಡಾ. ಚಂದ್ರಶೇಖರ ಕಂಬಾರ ಕುರಿತು ಡಾ. ಕವಿತಾ ಕುಸುಗಲ್ ಅವರು ಸಮಗ್ರ ಪ್ರಬಂಧಗಳನ್ನು ಮಂಡಿಸಿ ಅವರ ಸಾಹಿತ್ಯ ಸಾಧನೆ ಮತ್ತು ಭಾರತೀಯ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ವಿಶ್ಲೇಷಿಸಿದರು.

ಸಮಾರೋಪÀದಲ್ಲಿ ಮಾತನಾಡಿದ ಡಾ. ಮನು ಬಳಿಗಾರ್, ಕರ್ನಾಟಕದ ಸಮೃದ್ಧ ಸಾಹಿತ್ಯ ಪರಂಪರೆಯನ್ನು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಪರಿಚಯಿಸುವ ಜೊತೆಗೆ ಜ್ಞಾನಪೀಠ ಪುರಸ್ಕೃತರ ಕೃತಿಗಳ ಬಗ್ಗೆ ಆಸಕ್ತಿ ಮೂಡಿಸುವಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿರುವ ಸಿಯುಕೆ ಕಾರ್ಯವನ್ನು ಶ್ಲಾಘಿಸಿದರು.
ಡಾ. ಪ್ರಕಾಶ ಬಾಳಿಕಾಯಿ ಕಾರ್ಯಕ್ರಮ ನಿರೂಪಿಸಿದರು. ಡಾ. ಆಶಿಷ್ ಬೆಳಂಕರ ವಂದಿಸಿದರು. ಡಾ. ಜಯದೇವಿ ಜಂಗಮಶೆಟ್ಟಿ ರಾಷ್ಟçಗೀತೆ ಸಾಧರ ಪಡಿಸಿದರು.

Leave A Reply

Your email address will not be published.